ADVERTISEMENT

‘ಬೇರೆ ಪಕ್ಷದ ಪ್ರಧಾನಿಯಿದ್ದರೆ ಪೆಟ್ರೋಲ್‌ ದರ ₹30 ಆಗುತ್ತಿತ್ತೇ?: ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 9:45 IST
Last Updated 3 ನವೆಂಬರ್ 2021, 9:45 IST
   

ಹೊಸಪೇಟೆ: ‘ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಬೇರೆ ಪಕ್ಷದ ಪ್ರಧಾನಿ ಇದ್ದರೆ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹30 ಮಾಡಲು ಆಗುತ್ತಿತ್ತೇ?’ಹೀಗೆಂದು ಪ್ರಶ್ನಿಸಿದವರು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌.

‘ಪ್ರಧಾನಿ ನರೇಂದ್ರ ಮೋದಿಯವರಿಂದ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿದೆ ಎನ್ನುವುದು ಸರಿಯಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ದರ ಏರಿಳಿತಕ್ಕೆ ತಕ್ಕಂತೆ ನಮ್ಮ ದೇಶದಲ್ಲಿ ಬೆಲೆ ಏರುಪೇರಾಗುತ್ತದೆ. ಮೋದಿಯವರು ಕೇವಲ ಪೂಜೆ, ಪುನಸ್ಕಾರದಲ್ಲಿ ತೊಡಗಿದ್ದಾರೆ. ಬೆಲೆ ಏರಿಕೆ ತಡೆಯಲು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿರುವುದು ಸರಿಯಲ್ಲ’ ಎಂದು ಬುಧವಾರ ಇಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿರುವುದು ಪ್ರಧಾನಿಯವರಿಗೆ ತಿಳಿದಿಲ್ಲ ಅಂತಲ್ಲ. ಅದರ ಬಗ್ಗೆ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರಬಹುದು. ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡಬೇಕೆಂಬ ಚರ್ಚೆ ಇದೆ. ಬೆಲೆ ಏರಿಕೆಯಿಂದ ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ ಎಂದಾದರೆ, ಸಿಂದಗಿಯಲ್ಲಿ ಗೆದ್ದಿಲ್ಲವೇ? ಅಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಿಲ್ಲವೇ? ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸ್ಥಳೀಯ ವಿಷಯ ನೋಡಿಕೊಂಡು ಜನ ಮತ ಚಲಾಯಿಸುತ್ತಾರೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಗೆ ದಿಕ್ಸೂಚಿಯಲ್ಲ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಒಳಪಿತೂರಿ ನಡೆಸಿದ್ದರಿಂದ ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ ಎನ್ನುವುದರಲ್ಲಿ ಹುರುಳಿಲ್ಲ. ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಕೋವಿಡ್‌ ಲಾಕ್‌ಡೌನ್‌ನಲ್ಲಿ ಉತ್ತಮ ಕೆಲಸ ಮಾಡಿದ್ದರು. ಹೀಗಾಗಿ ಜನ ಅವರನ್ನು ಗೆಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಒಳ್ಳೆಯ ಕೆಲಸ ಮಾಡಿದವರನ್ನು ಜನ ಖಂಡಿತವಾಗಿಯೂ ಗೆಲ್ಲಿಸುತ್ತಾರೆ’ ಎಂದು ಹೇಳಿದರು.

ಹಂಪಿ ಉತ್ಸವಕ್ಕೆ ₹10 ಕೋಟಿ?:

‘ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ಕಡ್ಡಾಯವಾಗಿ ಹಂಪಿ ಉತ್ಸವ ಮಾಡಬೇಕು. ಅದಕ್ಕಾಗಿ ₹10 ಕೋಟಿ ತೆಗೆದಿಡಬೇಕು. ಈ ಕುರಿತ ಪ್ರಸ್ತಾವದ ಕಡತ ಹಣಕಾಸು ಇಲಾಖೆಗೆ ಕಳಿಸಲಾಗಿದೆ. ನ. 8ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ಭರವಸೆ ಇದೆ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.