ADVERTISEMENT

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 5:20 IST
Last Updated 16 ಜುಲೈ 2023, 5:20 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ (ಬಿಡಿಸಿಸಿ) ನೂತನ ಅಧ್ಯಕ್ಷರ ಆಯ್ಕೆಗೆ ಮೂರು ತಿಂಗಳಷ್ಟೇ ಬಾಕಿ ಇರುವಂತೆಯೇ ಹಾಲಿ ಅಧ್ಯಕ್ಷ ಆನಂದ್‍ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಜೂನ್‌ 27ರಂದು ಬರೆದಿರುವ ರಾಜೀನಾಮೆ ಪತ್ರದಲ್ಲಿ ಜುಲೈ 1ರಿಂದ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ವೈಯಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಬರೆಯಲಾಗಿದೆ. ಶನಿವಾರ ಈ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ ಸೋಲಿನಿಂದ ಕಂಗೆಟ್ಟಿರುವ ಅವರು ಈ ನಿರ್ಧಾರಕ್ಕೆ ಬಂದಿರಬೇಕು ಎಂದು ಹೇಳಲಾಗುತ್ತಿದೆ.

ADVERTISEMENT

ಅಕ್ಟೋಬರ್ 15ಕ್ಕೆ ಚುನಾವಣೆ ನಡೆಸಲು ಆದೇಶವಾಗಿದ್ದು, ಈಗಾಗಲೇ ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಹಂತದಲ್ಲಿ ಆನಂದ್‌ ಸಿಂಗ್ ರಾಜೀನಾಮೆ ಸಲ್ಲಿಸಿದ್ದರ ಔಚಿತ್ಯದ ಬಗ್ಗೆ ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಚರ್ಚೆಗಳು ಆರಂಭವಾಗಿವೆ.

ಮುಂದಿನ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ಸ್ಪರ್ಧಿಸುತ್ತಾರೋ, ಇಲ್ಲವೋ ಎಂಬ ಕುತೂಹಲವೂ ಗರಿಗೆದರಿದೆ. ಈ ಬಗ್ಗೆ ಅವರಿಂದಲೇ ಮಾಹಿತಿ ಪಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಕುಟುಂಬದಂತೆ ಇದ್ದೇವೆ: ‘ಆನಂದ್ ಸಿಂಗ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂಬ ಬಗ್ಗೆ ನನಗೂ ಮಾಹಿತಿ ಇಲ್ಲ. ಆದರೆ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ಅವರು ನೊಂದಿರುವುದಂತೂ ನಿಜ. ಆದರೆ ನಾವೆಲ್ಲ ಒಂದು ಕುಟುಂಬದಂತೆ ಇದ್ದೇವೆ. ಮುಂದೆ ಅಧ್ಯಕ್ಷರ ಚುನಾವಣೆ ಸಾಂಗವಾಗಿ ನೆರವೇರುವ ಆಶಯ ಇದೆ. ಬ್ಯಾಂಕ್ ಸದೃಢವಾಗಿದ್ದು, ಮುಂದೆಯೂ ಉತ್ತಮವಾಗಿ ಜನರಿಗೆ ಸೇವೆ ಸಲ್ಲಿಸಲಿದೆ’ ಎಂದು ಬ್ಯಾಂಕ್‌ನ ನಿರ್ದೇಶಕರಾಗಿರುವ ಎಲ್‌.ಎಸ್‌. ಆನಂದ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಪರಿಣಾಮ ಇಲ್ಲ?: ಈಗಾಗಲೇ ಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ರಾಜೀನಾಮೆ ನೀಡಿದರೂ, ನೀಡದಿದ್ದರೂ ದೈನಂದಿನ ಚಟುವಟಿಕೆಗಳ ಹೊರತಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಆನಂದ್‌ ಸಿಂಗ್ ಅವರ ರಾಜೀನಾಮೆಯಿಂದ ಅಂತಹ ದೊಡ್ಡ ಪರಿಣಾಮವೇನೂ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.