ADVERTISEMENT

ಹಗರಿಬೊಮ್ಮನಹಳ್ಳಿ: ರೈತರಿಗೆ ಭೂಮಿ ಹಿಂದಿರುಗಿಸಿದ ಆಂಧ್ರ ಮಹಿಳೆ

ಮಾಜಿ ಶಾಸಕ ಭೀಮನಾಯ್ಕ ಖರೀದಿಸಿ ವಾಪಾಸು ನೀಡಿದ್ದ ವಿವಾದಿತ ಭೂಮಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:04 IST
Last Updated 28 ಜುಲೈ 2025, 7:04 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದ ರೈತರಿಗೆ ಭೂಮಿ ನೋಂದಣಿ ಮಾಡಿಕೊಟ್ಟ ಪತ್ರ ಮತ್ತು ಪಹಣಿಯನ್ನು ಮುಖಂಡರು ಪ್ರದರ್ಶಿಸಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದ ರೈತರಿಗೆ ಭೂಮಿ ನೋಂದಣಿ ಮಾಡಿಕೊಟ್ಟ ಪತ್ರ ಮತ್ತು ಪಹಣಿಯನ್ನು ಮುಖಂಡರು ಪ್ರದರ್ಶಿಸಿದರು   

ಹಗರಿಬೊಮ್ಮನಹಳ್ಳಿ: ಮಾಜಿ ಶಾಸಕ ಎಲ್.ಬಿ.ಪಿ.ಭೀಮನಾಯ್ಕ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಕುರುಬ ಸಮಾಜಕ್ಕೆ ಸೇರಿದ ಬಡ ರೈತರ ಭೂಮಿಯನ್ನು ಈ ಹಿಂದೆ ಆಂಧ್ರಪ್ರದೇಶ ಮೂಲದವರಿಂದ ಖರೀದಿಸಿ ಮತ್ತೆ ಅವರಿಗೆ ಹಿಂದಿರುಗಿಸಿದ್ದರು. ಆದರೆ, ಆ ಭೂಮಿಯನ್ನು ಸ್ವಯಂ ಪ್ರೇರಿತರಾಗಿ ಆಂಧ್ರಪ್ರದೇಶದ ಮಹಿಳೆ ಉಚಿತವಾಗಿ ತಾಲ್ಲೂಕಿನ ಕೇಶವರಾಯನಬಂಡಿ ಮೂಲ ರೈತರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಕುರುಬರ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ಶುಕ್ರವಾರ ನಡೆದ ವಿವಿಧ ಸಮಾಜಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಭೀಮನಾಯ್ಕ ಅವರು ಹಿಂದೆ ಶಾಸಕರಾಗಿದ್ದಾಗ 2022ರಲ್ಲಿ ಗ್ರಾಮದಲ್ಲಿದ್ದ 7.97 ಎಕರೆ ಭೂವಿವಾದದ ಕುರಿತು ಮನವರಿಕೆ ಮಾಡಲಾಗಿತ್ತು. ಹಾಗಿದ್ದರೂ ಖರೀದಿ ಪತ್ರವನ್ನು ರದ್ದುಗೊಳಿಸಿ ವಾಪಾಸು ಕೊಡುವುದಾಗಿ ದೈವಸ್ತರ ಸಭೆಯಲ್ಲಿ ಮಾತುಕೊಟ್ಟು ತಪ್ಪಿದ್ದರು. ಬಳಿಕ ಅದನ್ನು ಖರೀದಿಸಿದವರಿಗೆ ಮರು ಮಾರಾಟ ಮಾಡುವ ಮೂಲಕ ಬಡ ಕುಟುಂಬದ ರೈತರಿಗೆ ಮೋಸ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈಗ ಸ್ವಯಂ ಪ್ರೇರಿತರಾಗಿ ಬಡವರ ಕಷ್ಟಗಳಿಗೆ ಸ್ಪಂದಿಸಿದ ಆಂಧ್ರಪ್ರದೇಶ ಮೂಲದ ಪದ್ಮಜಾ ಅವರು ಜುಲೈ 16ಕ್ಕೆ ಹಿಂದಿರುಗಿಸಿದ್ದಾರೆ. ಕುರುಬರ ಹೇಮಂತ ಅವರಿಗೆ ಸರ್ವೇನಂಬರ್ 144 ಮತ್ತು 145ರಲ್ಲಿ 4.11 ಎಕರೆ ನೋಂದಣಿ ಮಾಡಿಸಿದ್ದಾರೆ ಎಂದರು.

ಭೀಮನಾಯ್ಕ ಅವರನ್ನು ಕೇವಲ 3.18 ಎಕರೆ ಕೇಳಿದ್ದರೂ ಸ್ಪಂದಿಸಿರಲಿಲ್ಲ, ಬಡವರಿಗೆ ಅನ್ಯಾಯ ಮಾಡಿದ್ದರು, ಈಗಲೂ ಕುರುಬ ಸಮಾಜದ ಅನೇಕರು ಅವರ ಮನೆಯ ಗೇಟ್ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಗ್ರಾಮದ ಬಡವರಿಗೆ ಈಗ ನ್ಯಾಯ ಸಿಕ್ಕಿದೆ ಎಂದರು.

ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ಈ ಹಿಂದೆ ಭೀಮನಾಯ್ಕ ಅವರನ್ನು ಭೂಮಿ ವ್ಯಾಜ್ಯವನ್ನು ಬಗೆಹರಿಸಿಕೊಡುವಂತೆ ವಿನಂತಿಸಿಕೊಳ್ಳಲಾಗಿತ್ತು. ಅವರು ತಮ್ಮ ಹಠ ಬಿಡಲಿಲ್ಲ. ಹೋರಾಟಗಳಾದವು. ಅದೇ ಅವರಿಗೆ ಚುನಾವಣೆಯಲ್ಲಿ ಮುಳುವಾಯಿತು ಎಂದರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮೈನಹಳ್ಳಿ ಶಿವರಾಜ್, ಭಂಡಾರಿ ಭರಮಪ್ಪ, ಎಚ್.ಕೆ.ರಾಮು, ಬಿ.ಎಂ.ಆಂಜನೇಯ, ಪ್ರಭಾಕರ, ಲೋಕೇಶ್, ಪಂಪಾಪತಿ, ಬಾಣದ ಹನುಮಂತ, ದಾನಪ್ಪ, ನಾಣಿಕೇರಿ ದೊಡ್ಡಬಸಪ್ಪ, ನಾಗೇಂದ್ರ, ಪಿ.ಗಣೇಶ್, ಮುದ್ದಳ್ಳಿ ಈಶಪ್ಪ, ಹುಡೇದ ಹುಲುಗಪ್ಪ, ಅಂಬಣ್ಣ, ಬಲ್ಲಾಹುಣ್ಸಿ ನಾಗರಾಜ, ನೇತ್ರಾನಂದಪ್ಪ, ಕಂಬಳಿ ಜಂಬಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.