ADVERTISEMENT

ಆತ್ಮಹತ್ಯೆ ಪ್ರಕೃತಿಗೆ ವಿರುದ್ಧ: ಜಿಲ್ಲಾ ನ್ಯಾಯಾಧೀಶ

ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 16:19 IST
Last Updated 11 ಸೆಪ್ಟೆಂಬರ್ 2024, 16:19 IST
ಹೊಸಪೇಟೆಯಲ್ಲಿ ಬುಧವಾರ ನಡೆದ ಆತ್ಮಹತ್ಯೆ ವಿರೋಧಿ ದಿನಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಆತ್ಮಹತ್ಯೆ ವಿರುದ್ಧ ಪ್ರತಿಜ್ಞೆ ಮಾಡಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ನಡೆದ ಆತ್ಮಹತ್ಯೆ ವಿರೋಧಿ ದಿನಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಆತ್ಮಹತ್ಯೆ ವಿರುದ್ಧ ಪ್ರತಿಜ್ಞೆ ಮಾಡಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಹುಟ್ಟು, ಸಾವು ಪ್ರಕೃತಿಗೆ ಸಂಬಂಧಿಸಿದ್ದು. ಅದನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಪ್ರಕೃತಿಗೆ ವಿರುದ್ಧವಾದುದು’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಎ.ನಂದಗಡಿ ಹೇಳಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಿತ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಆರ್ಥಿಕ ತೊಂದರೆ ಸೇರಿದಂತೆ ಹಲವಾರು ಕಾರಣಗಳಿರುತ್ತವೆ. ಯಾವುದೇ ಸಮಸ್ಯೆ ಶಾಶ್ವತವಲ್ಲ ಎನ್ನುವ ಸರಳ ಸತ್ಯವನ್ನು ಅರಿಯಬೇಕು. ಎದುರಾದ ಸಮಸ್ಯೆಗಳ ಬಗ್ಗೆ ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಹೇಳಿಕೊಂಡಾಗ ಕೆಲವು ಸಲಹೆಗಳು ಸಿಗುತ್ತವೆ. ಏಕೆಂದರೆ ಒಬ್ಬ ವ್ಯಕ್ತಿಯ ಆಲೋಚನೆಯು ಮತ್ತೊಬ್ಬ ವ್ಯಕ್ತಿಯ ಆಲೋಚನೆಗಿಂತ ವಿಭಿನ್ನವಾಗಿರುತ್ತದೆ’ ಎಂದು ತಿಳಿಸಿದರು.

ADVERTISEMENT

ವೈದ್ಯಾಧಿಕಾರಿ ಡಾ.ಸೋಮಶೇಖರ ಕೆ. ಮಾತನಾಡಿ, ‘ಪ್ರತಿ ವರ್ಷ ವಿಶ್ವದಲ್ಲಿ 1.70 ಲಕ್ಷ ಜನರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಶೇ70 ಪುರುಷರು ಹಾಗೂ ಶೇ30 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಾನಸಿಕ ಖಿನ್ನತೆ’ ಎಂದು ತಿಳಿಸಿದರು.

‘ಸೂರ್ಯ ನಮಸ್ಕಾರ ಮಾಡುವುದರಿಂದ, ನಡೆದಾಡುವುದರಿಂದ, ಪುಸ್ತಕ ಓದುವುದರಿಂದ ಹಾಗೂ ಧ್ಯಾನ ಮಾಡುವುದರಿಂದ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಹೇಮಲತಾ ಬಿ. ಹುಲ್ಲೂರ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶ ‌ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್., 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂಜೀವ್ ಕುಮಾರ್ ಜಿ., 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೈತ್ರ. ಜೆ., ವಕೀಲರ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ್,  ಆರ್‌ಸಿಎಚ್‌ ಅಧಿಕಾರಿ ಡಾ.ಜಂಬಯ್ಯ, ಇನ್‌ಸ್ಪೆಕ್ಟರ್ ಜಯಲಕ್ಷ್ಮಿ, ಪ್ರಾಂಶುಪಾಲ ರಾಜೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.