ADVERTISEMENT

‘ವಸ್ತುವಿನ ಮೌಲ್ಯಕ್ಕೆ ನ್ಯೂನತೆಯಿದ್ದಲ್ಲಿ ಪರಿಹಾರ ಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 14:04 IST
Last Updated 16 ಮಾರ್ಚ್ 2022, 14:04 IST
ಹೊಸಪೇಟೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮ ಪ್ರಸಾದ್ ಮಾತನಾಡಿದರು
ಹೊಸಪೇಟೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮ ಪ್ರಸಾದ್ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಖರೀದಿಸಿದ ವಸ್ತುವಿನ ಮೌಲ್ಯದಲ್ಲಿ ನ್ಯೂನತೆ ಇದ್ದಲ್ಲಿ ಗ್ರಾಹಕರು ಜಿಲ್ಲಾ ಮಟ್ಟದ ಗ್ರಾಹಕ ವೇದಿಕೆಯಲ್ಲಿ ₹20 ಲಕ್ಷದ ವರೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮ ಪ್ರಸಾದ್ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಬುಧವಾರ ಸಿಡಿಪಿಒ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘₹20 ಲಕ್ಷದಿಂದ ₹1 ಕೋಟಿಯವರೆಗೆ ರಾಜ್ಯ ಮಟ್ಟದ ವೇದಿಕೆಯಲ್ಲಿ ಅರ್ಜಿ ಸಲ್ಲಿಸಬಹುದು. ₹1 ಕೋಟಿಯಿಂದ ₹10 ಕೋಟಿವರೆಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪರಿಹಾರ ಕೋರಬಹುದು. ಗ್ರಾಹಕರು ಆನ್‌ಲೈನ್‌ ಪೇಮೆಂಟ್ ಹಾಗೂ ಇತರೆ ಆ್ಯಪ್ ಮೂಲಕ ಖರೀದಿಸಿದ ವಸ್ತುಗಳಲ್ಲಿ ಬೆಲೆಗೆ ತಕ್ಕ ಉತ್ಪನ್ನ ಬರದಿದ್ದ ಪಕ್ಷದಲ್ಲಿ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು’ ಎಂದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ ಅವರು ಮಾತನಾಡಿ, ವಸ್ತುವಿಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಆ ವಸ್ತುವಿನಲ್ಲಿ ನ್ಯೂನತೆ ಕಂಡುಬಂದಲ್ಲಿ 15 ದಿನಗಳಲ್ಲಿ ಗ್ರಾಹಕ ವೇದಿಕೆಯ ಮೊರೆ ಹೋಗಬಹುದು. 2 ವರ್ಷದೊಳಗೆ ಗ್ರಾಹಕರು ಪರಿಹಾರ ಪಡೆಯಬಹುದು ಎಂದು ತಿಳಿಸಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕರುಣಾನಿಧಿ ಮಾತನಾಡಿ, ಎಲ್ಲ ರೀತಿಯ ವಸ್ತುಗಳಿಗೆ ಬೆಲೆ ನಿಗದಿಯಾಗಿರುತ್ತದೆ. ಅದೇ ರೀತಿ ಕಾರ್ಮಿಕರಿಗೆ ಸಮಯಕ್ಕೆ ತಕ್ಕ ಕೂಲಿ ನೀಡಬೇಕು. ಇಲ್ಲವಾದಲ್ಲಿ ಅಂತಹವರು ಗ್ರಾಹಕ ವೇದಿಕೆಗೆ ದೂರು ಕೊಡಬಹುದು ಎಂದರು.

ಸಿಡಿಪಿಎ ಸಿಂಧು ಯಲಿಗಾರ, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಬಸವರಾಜ, ಸಹಾಯಕ ಸಿಡಿಪಿಒ ಎಳೆನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.