ADVERTISEMENT

ವಿಜಯನಗರ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 8:59 IST
Last Updated 11 ಡಿಸೆಂಬರ್ 2022, 8:59 IST
   

ಹೊಸಪೇಟೆ (ವಿಜಯನಗರ): ‘ಆಶಾ ಕಾರ್ಯಕರ್ತೆಯರಿಗೆ ₹12 ಸಾವಿರ ಕನಿಷ್ಠ ವೇತನ ಡಿಸೆಂಬರ್‌ನೊಳಗೆ ನಿಗದಿಪಡಿಸಬೇಕು. ಗಡುವಿನೊಳಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದರು.


ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.


‘ನಮ್ದು ಡಬಲ್‌ ಎಂಜಿನ್‌ ಸರ್ಕಾರವೆಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಅವರೇನು ಮಾಡಿದ್ದಾರೆ? ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ ನಿಗದಿಪಡಿಸಬೇಕು. ಆದರೆ, ಆ ಕೆಲಸ ಮಾಡಿಲ್ಲ. ಆರೋಗ್ಯ ಸಮಸ್ಯೆಯಿದ್ದವರಿಗೆ ಮೂರು ತಿಂಗಳು ವೇತನ ಸಹಿತ ರಜೆ ಕೊಡಬೇಕು. ಕೋವಿಡ್‌ ಸಂದರ್ಭದ ಬಾಕಿ ಹಣ ಪಾವತಿಸಬೇಕು. ಈ ಕುರಿತು ಹಲವು ಸಲ ಮನವಿ ಸಲ್ಲಿಸಲಾಗಿದೆ. ಡಿಸೆಂಬರ್‌ನೊಳಗೆ ಇದರ ಬಗ್ಗೆ ತೀರ್ಮಾನಕ್ಕೆ ಬರದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT


ಎಲ್ಲ ರೀತಿಯ ಭತ್ಯೆಗಳು ಸೇರಿದಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹6ರಿಂದ ₹7 ಸಾವಿರ ಪಾವತಿಸಲಾಗುತ್ತಿದೆ. ಅದು ಕೂಡ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಆದರೆ, ಅವರದಲ್ಲದ ಕೆಲಸ ಮಾಡಿಸಲಾಗುತ್ತಿದೆ. ದತ್ತಾಂಶ ದಾಖಲಿಸಲು ಅವರೇ ಮೊಬೈಲ್‌ ಕೊಡಬೇಕು. ಆದರೆ, ಆಶಾ ಕಾರ್ಯಕರ್ತೆಯರು ₹10ರಿಂದ ₹12 ಸಾವಿರ ಕೊಟ್ಟು ಮೊಬೈಲ್‌ ಖರೀದಿಸಬೇಕು. ಪ್ರತಿ ತಿಂಗಳು ₹400 ಕರೆನ್ಸಿ ಹಾಕಿಸಬೇಕು. ಅಲ್ಪ ಗೌರವ ಧನದಲ್ಲಿ ಇಷ್ಟೆಲ್ಲ ಮಾಡಿಸಿಕೊಳ್ಳುತ್ತಿರುವುದು ಸರಿಯೇ? ಜೀವ ಉಳಿಸುವ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಬೆಲೆಯಿಲ್ಲವೇ? ಪ್ರಶ್ನಿಸಿದರು.


ಕೋವಿಡ್‌ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಇಡೀ ಜಗತ್ತು ಮೆಚ್ಚುವಂಥ ಕೆಲಸ ಮಾಡಿದ್ದಾರೆ. ಸ್ವತಃ ಆರೋಗ್ಯ ಇಲಾಖೆಯು ಕೊಂಡಾಡಿತ್ತು. ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದವು. ರಾಜ್ಯದಲ್ಲಿ ಒಟ್ಟು 20 ಜನ ಆಶಾ ಕಾರ್ಯಕರ್ತೆಯರು ಜೀವ ಕಳೆದುಕೊಂಡಿದ್ದಾರೆ. ಜೀವ ಹಂಗು ತೊರೆದು ಕೋವಿಡ್‌ ಸಂದರ್ಭದಲ್ಲಿ ಮನೆ ಮನೆಗೂ ಭೇಟಿ ಕೊಟ್ಟು ಜನರಿಗೆ ಧೈರ್ಯ ತುಂಬಿದ್ದಾರೆ. ಇವರ ಕೆಲಸಕ್ಕೆ ಬೆಲೆಯಿಲ್ಲವೇ? ಎಂದು ಕೇಳಿದರು.


ಸಂಘದ ಜಿಲ್ಲಾಧ್ಯಕ್ಷ ದೇವದಾಸ ಮಾತನಾಡಿ, ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲು ಹಿಂದೇಟು ಹಾಕುತ್ತಿರುವವರೆಲ್ಲ ಈಗ ಹೋಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇಷ್ಟೆಲ್ಲ ಮಾಡುತ್ತಿದ್ದರೂ ಕನಿಷ್ಠ ವೇತನ ನಿಗದಿಪಡಿಸದಿರುವುದು ಸರಿಯಲ್ಲ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಬಂಡವಾಳಷಾಹಿಗಳ ಪರವಾದ ನೀತಿಗಳನ್ನು ಜಾರಿಗೆ ತಂದಿವೆ. ಕಾರ್ಮಿಕರ ಹಕ್ಕುಗಳನ್ನು ವ್ಯವಸ್ಥಿತವಾಗಿ ಮೊಟಕುಗೊಳಿಸಲಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ. ಈ ಬಂಡವಾಳಷಾಹಿ ವ್ಯವಸ್ಥೆ ವಿರುದ್ಧ ಸಂಘಟಿತರಾಗಿ ಹೋರಾಡದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.


ಸಂಘದ ಜಿಲ್ಲಾ ಸಂಚಾಲಕ ಡಾ. ಪ್ರಮೋದ್‌, ವೀರಮ್ಮ, ನಾಗಮ್ಮ, ಸರೋಜ, ಶಾಂತಮ್ಮ, ಗೀತಾ, ಚನ್ನಮ್ಮ, ವಿಜಯಲಕ್ಷ್ಮಿ, ನೇತ್ರಾವತಿ, ಅನ್ನಪೂರ್ಣ, ರಾಮವ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.