ADVERTISEMENT

ಹೊಸ ದಾಖಲೆ ಬರೆದ ವಿಜಯನಗರ ಜಿಲ್ಲೆ: ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 8:23 IST
Last Updated 15 ಆಗಸ್ಟ್ 2022, 8:23 IST
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಧ್ವಜಸ್ತಂಭ ಉದ್ಘಾಟಿಸಿದರು. 
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಧ್ವಜಸ್ತಂಭ ಉದ್ಘಾಟಿಸಿದರು.    

ಹೊಸಪೇಟೆ (ವಿಜಯನಗರ): ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸಿ, ಅದರ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡುವುದರೊಂದಿಗೆ ವಿಜಯನಗರ ಜಿಲ್ಲೆ ಸೋಮವಾರ ಹೊಸ ದಾಖಲೆ ಬರೆಯಿತು.

ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ನಗರದ ಮುನ್ಸಿಪಲ್‌ ಮೈದಾನದಲ್ಲಿ ನಿರ್ಮಿಸಿದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸೋಮವಾರ 120X80 ಅಳತೆಯ ರಾಷ್ಟ್ರ ಧ್ವಜ ಹಾರಿಸಲಾಯಿತು. ಬೆಳಿಗ್ಗೆ 5ಕ್ಕೆ ಪ್ರಾಯೋಗಿಕವಾಗಿ ಧ್ವಜ ಹಾರಿಸಲಾಯಿತು.

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಧ್ವಜ ಪೂರ್ಣ ಮೇಲೇರಲಿಲ್ಲ. ಬಜಾಜ್‌ ಕಂಪನಿಯ ತಂತ್ರಜ್ಞರು ಹಾಗೂ ಚಿತ್ರದುರ್ಗದ ಜ್ಯೋತಿರಾಜ್‌ ಅವರ ನೆರವಿನೊಂದಿಗೆ ಸ್ತಂಭದ ಒಳಗೆ ಗಂಟಿಕ್ಕಿಕೊಂಡಿದ್ದ ತಂತಿ ಸರಿಪಡಿಸಿ ಧ್ವಜ ಹಾರಾಡುವಂತೆ ಮಾಡಲಾಯಿತು.

ಡೀ ಪ್ರಕ್ರಿಯೆ ಮುಗಿಯಲು 36 ನಿಮಿಷ ಬೇಕಾಯಿತು. ಧ್ವಜ ಹಾರಿಸುವ ಪ್ರಕ್ರಿಯೆ ಸಂಕೀರ್ಣವಾಗಿದ್ದರಿಂದ ಅದನ್ನು ಪುನಃ ಕೆಳಗಿಳಿಸಿ ಹಾರಿಸದೇ ಹಾಗೆ ಬಿಡಲು ತೀರ್ಮಾನಿಸಲಾಯಿತು. ಬೆಳಿಗ್ಗೆ 9ಕ್ಕೆ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ದೀಪ ಬೆಳಗಿಸಿ ಸಾಂಕೇತಿಕವಾಗಿ ಉದ್ಘಾಟಿಸಿದರು.

‘ಬೆಳಗಾವಿಯಲ್ಲಿ 361 ಅಡಿ ಎತ್ತರದ ಧ್ವಜಸ್ತಂಭ ದೇಶದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆ ಹೊಂದಿತ್ತು. ಈಗ ಆ ಕೀರ್ತಿ ವಿಜಯನಗರ ಜಿಲ್ಲೆಯ ಪಾಲಾಗಿದೆ. 405 ಅಡಿ ಎತ್ತರದ ಧ್ವಜಸ್ತಂಭ ಇದುವರೆಗೆ ದೇಶದಲ್ಲಿ ಎಲ್ಲೂ ಅಳವಡಿಸಿಲ್ಲ. ಜಗತ್ತಿನಲ್ಲೇ ಅತಿ ಎತ್ತರದ ಧ್ವಜಸ್ತಂಭಗಳಲ್ಲಿ ಇದು 9ನೆಯದು. ಮೊದಲ ಸಲ ದೇಶದಲ್ಲಿ ಇಷ್ಟೊಂದು ಎತ್ತರದ ಧ್ವಜಸ್ತಂಭ ಅಳವಡಿಸಲಾಗಿದ್ದು, ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಗಾಳಿ, ಮಳೆ ಪ್ರತಿಕೂಲ ವಾತಾವರಣದ ನಡುವೆಯೂ ಯಶಸ್ವಿಯಾಗಿ ಸುರಕ್ಷಿತ ಮತ್ತು ಗೌರವದಿಂದ ಆ.15ರಂದೇ ಧ್ವಜಾರೋಹಣ ಮಾಡಲಾಗಿದೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT