ಡಿ.ಕೆ.ಶಿವಕುಮಾರ್
ಹೊಸಪೇಟೆ (ವಿಜಯನಗರ): ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ, ಸಚಿವ ಸಂಪುಟದಲ್ಲಿ ಮತ್ತೆ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಾಧನಾ ಸಮಾವೇಶದ ಸಿದ್ಧತೆಗಳನ್ನು ನೋಡಲು ಶುಕ್ರವಾರ ಇಲ್ಲಿಗೆ ಬಂದಿದ್ದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.
ಪಕ್ಷದಲ್ಲಿ ಯಾವುದೇ ಬಣ ಇಲ್ಲ, ಇರುವುದು ಒಂದೇ ಬಣ ಎಂದರು.
ಸರ್ಕಾರ ಎರಡು ವರ್ಷದ ಸಂಭ್ರಮದಲ್ಲಿದೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ 20ನೇ ತಾರೀಕಿನಂದು ಸಾಧನಾ ಸಮಾವೇಶ ಮಾಡುತ್ತೇವೆ ಎಂದರು.
'5 ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ನಾವು ನಾನಾ ಕಡೆ ಸಮಾವೇಶ ಮಾಡಿದ್ದೇವೆ. ಜನರಲ್ಲಿ ಹೊಸ ಶಕ್ತಿ ತುಂಬಬೇಕು ಎಂಬುದು ಸರ್ಕಾರದ ಚಿಂತನೆಯಾಗಿತ್ತು, ಅದನ್ನು ಸಾಧಿಸಿದ್ದೇವೆ ಎಂದರು.
'ಕಂದಾಯ ಇಲಾಖೆಯಿಂದ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡ್ತೇವೆ. ಉಳಿದಂತೆ ಸಂಭ್ರಮ, ಆಚರಣೆ ಮಾಡ್ತೇವೆ' ಎಂದು ಹೇಳಿದರು.
ನವಿಲೆ ಜಲಾಶಯ: ನವಿಲೆ ಜಲಾಶಯದ ಕುರಿತು ನಾವು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿದ್ದೇವೆ . ನಾನು ಆಂಧ್ರ ಸಿಎಂ ಜತೆ ಮಾತನಾಡಿದ್ದೇನೆ. ಟೆಕ್ನಿಕಲ್ ಟೀಂ, ಬಂದಿದೆ ಪರಿಶೀಲನೆ ಮಾಡಿದೆ, ನೀರು ಉಳಿಸಿಕೊಳ್ಳೋಕೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಬಸವಸಾಗರ ಜಲಾಶಯಕ್ಕೆ ನೀರು ಹರಿಸಲು ಮಾಡಲು ಚಿಂತನೆ ನಡೆಸಲಾಗಿದೆ' ಎಂದು ಡಿಸಿಎಂ ಹೇಳಿದರು.
ಗೇಟ್: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್ ಗಳ ಬದಲಾವಣೆ ಮಾಡುತ್ತೇವೆ, ಮೂರು ರಾಜ್ಯ ಸೇರಿ ಅದನ್ನು ಮಾಡುತ್ತೇವೆ. ಈ ವರ್ಷ ಗೇಟ್ ಬದಲಾವಣೆ ಆಗಲಿಕ್ಕಿಲ್ಲ' ಎಂದರು.
ಕಳಸಾ ಬಂಡೂರಿ-ಪ್ರತ್ಯೇಕ ಸಭೆಯ ಭರವಸೆ:
'ಕಳಸಾ ಬಂಡೂರಿ ವಿಚಾರದಲ್ಲಿ ನಾನು ಕೇಂದ್ರದ ನಾಲ್ಕು ಜನ ಸಚಿವರ ಬಳಿ ಮಾತನಾಡಿ ಬಂದಿರುವೆ. ಪ್ರತ್ಯೇಕ ಸಭೆ ಮಾಡುತ್ತೇವೆ ಅಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಕ್ಕರೆ ಕಾರ್ಖಾನೆ: ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಯಾರು ಬೇಕಾದ್ರೂ ಹಾಕಲಿ, ರಾಜ್ಯ ಸರ್ಕಾರದಿಂದ ಹಾಕೋಕೆ ಆಗೋಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.