ADVERTISEMENT

ಹೊಸಪೇಟೆ | ಬಿಡಿಸಿಸಿ ಬ್ಯಾಂಕ್‌ಗೆ ₹12.72 ಕೋಟಿ ಲಾಭ: ಕೆ.ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:00 IST
Last Updated 21 ಜುಲೈ 2025, 6:00 IST
ಕೆ.ತಿಪ್ಪೇಸ್ವಾಮಿ
ಕೆ.ತಿಪ್ಪೇಸ್ವಾಮಿ   

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) 2024–25ನೇ ಸಾಲಿನಲ್ಲಿ ₹12.72 ಕೋಟಿ ಲಾಭ ಗಳಿಸಿದೆ. ಷೇರುದಾರರಿಗೆ ಶೇ 4ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂಧು ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

ಭಾನುವಾರ ಇಲ್ಲಿ ನಡೆದ ಬ್ಯಾಂಕ್‌ನ ಮಹಾಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಆರ್‌ಬಿಐ ನಿಯಮಗಳ ಪ್ರಕಾರ ಸಿಆರ್‌ಎಆರ್ ಶೇ 9ಕ್ಕಿಂತ ಹೆಚ್ಚು ಇರಬೇಕಿದ್ದು, ಬ್ಯಾಂಕ್‌ನ ಸಿಆರ್‌ಎಆರ್‌ ಶೇ 12.22ರಷ್ಟು ಹೊಂದಿ ಸುಸ್ಥಿರ ಬಂಡವಾಳ ಪ್ರಮಾಣ ಹೊಂದಿದೆ ಎಂದರು.

ಬ್ಯಾಂಕ್‌ನ ವ್ಯವಹಾರ ಗಾತ್ರ ₹3,590.33 ಕೋಟಿಯಷ್ಟಿದೆ. ₹2,724.74 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹1,687.80 ಕೋಟಿ ಠೇವಣಿ ಹೊಂದಿದೆ ಎಂದರು.

ADVERTISEMENT

ಸಾಲ ನೀಡಿಕೆ: 1,16,896 ರೈತರಿಗೆ ಶೂನ್ಯ ಬಡ್ಡಿ ದರದ ಕೆಸಿಸಿ ಸಾಲ ₹1,068.05 ಕೋಟಿ ಹಾಗೂ ಶೇ 3 ಬಡ್ಡಿದರದ ಭೂ ಅಭಿವೃದ್ಧಿ ಸಾಲ ₹59.20 ಕೋಟಿ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ 94.29ರಷ್ಟಿದೆ ಎಂದು ಅಧ್ಯಕ್ಷರು ತಿಳಿಸಿದರು.

ಹೊರಬಾಕಿ: ಬ್ಯಾಂಕ್‌ನ ಒಟ್ಟು ಸಾಲದ ಹೊರಬಾಕಿ ಮೊತ್ತ ₹1,902.53 ಕೋಟಿಯಷ್ಟಿದೆ. ಅದು ಕಳೆದ ವರ್ಷ 1,743.,25 ಕೋಟಿಯಷ್ಟಿತ್ತು ಎಂದರು.

ಆನ್‌ಲೈನ್ ಡ್ರಾಯಲ್‌: ಬ್ಯಾಂಕ್ ಆನ್‌ಲೈನ್ ಡ್ರಾಯಲ್‌ ವ್ಯವಸ್ಥೆ ಜಾರಿಗೊಳಿಸಿದೆ. ಸಂಘದಿಂದ ಆನ್‌ಲೈನ್‌ನಲ್ಲಿ ಸ್ವೀಕೃತಿಯಾದ ಡ್ರಾಯಲ್‌ಗಳನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಪರಿಶೀಲಿಸಿ ಸಂಘದ ಡ್ರಾಯಲ್ ಮಾನ್ಯ ಮಾಡಿ ಸಾಲ ಮಂಜೂರು ಮಾಡಿದ ತಕ್ಷಣ ನೇರವಾಗಿ ರೈತರ ಉಳಿತಾಯ ಖಾತೆಗೆ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ನ ಬಹುತೇಕ ಎಲ್ಲಾ ನಿರ್ದೇಶಕರು, ಸಿಇಒ ಬಿ.ಜಯಪ್ರಕಾಶ್ ಇತರರು ಇದ್ದರು.

ಇ–ಕೆಸಿಸಿ ಯೋಜನೆ
ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಗಣಕೀಕರಣಗೊಳಿಸಿ ಇ–ಕೆಸಿಸಿ ಯೋಜನೆ ರೂಪಿಸಲಾಗುವುದು. ಉಭಯ  ಜಿಲ್ಲೆಗಳಲ್ಲಿ 14 ಹೊಸ ಶಾಖೆಗಳನ್ನು ಆರಂಭಿಸಲು ಆರ್‌ಬಿಐನಿಂದ ಪರವಾನಗಿ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆಫ್‌ಸೈಟ್ ಎಟಿಎಂಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆ.ತಿಪ್ಪೇಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.