ADVERTISEMENT

ಲಂಬಾಣಿ, ಭೋವಿ ಜನಾಂಗ ಎಸ್ಸಿ ಪಟ್ಟಿಯಿಂದ ಕೈಬಿಡಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 12:58 IST
Last Updated 11 ಮಾರ್ಚ್ 2023, 12:58 IST
   

ಹರಪನಹಳ್ಳಿ (ವಿಜಯನಗರ): 'ರಾಜ್ಯದ ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗಗಳನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ಕೈಬಿಡುವುದಿಲ್ಲ' ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಅನುಷ್ಠಾನ ಕುರಿತು ರಚಿಸಿರುವ ಮಾಧುಸ್ವಾಮಿ ನೇತೃತ್ವದ ಉಪಸಮಿತಿಯಿಂದ ಚುನಾವಣೆ ಪೂರ್ವದಲ್ಲಿಯೇ ವರದಿ ಪಡೆದು, ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸ್ಸು ಮಾಡುತ್ತಾರೆ ಎಂದರು.

ಒಳಮೀಸಲಾತಿ ವರ್ಗೀಕರಣದ ಬಳಿಕ ಜಾರಿಯಾಗುವ ಹೊಸ ನೀತಿಯಲ್ಲಿ ಎಡಗೈ, ಬಲಗೈ, ಅಲೆಮಾರಿಗಳಿಗೆ ನ್ಯಾಯ ದೊರೆಯುತ್ತದೆ. ಆಗ ಎಲ್ಲರೂ ವಿಜಯೋತ್ಸವ ಆಚರಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು.

ADVERTISEMENT

30 ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ 3000 ಎಸ್ಸಿ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್, ಐಪಿಎಸ್ ತರಬೇತಿ ಆರಂಭಿಸಲಾಗಿದೆ. ಇದನ್ನು ಮುಂದೆ ವಸತಿಯುತ ಕೋಚಿಂಗ್ ಕೇಂದ್ರಗಳಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದರು.

ನಮ್ಮ ಇಲಾಖೆಯಿಂದ ಶೇ.50ರಷ್ಟು ಸಬ್ಸಿಡಿ ಆಧಾರಿತ ಗಂಗಾ ಕಲ್ಯಾಣ, ಎಸ್ಸಿ ಜನಾಂಗಕ್ಕೆ ಲಾಜಿಸ್ಟಿಕ್ ವಾಹನ ಖರೀದಿಸಲು ಸಹಾಯಧನ, ಸಾಲ ಪಡೆದವರಿಗೆ ಶೇ.50ರಷ್ಟು ಬಡ್ಡಿ ಕಡಿತಗೊಳಿಸಬೇಕೆಂದು ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಆದರ್ಶ ಗ್ರಾಮ ಯೋಜನೆಯಡಿ 2800 ಹಳ್ಳಿಗಳಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಕುಂಕುಮದ ವಿಚಾರವಾಗಿ ಮಹಿಳೆಗೆ ಅಪಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ಅಲ್ಲಿ ಏನು ನಡೆದಿದೆ ಎನ್ನುವ ವಿವರ ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದಷ್ಟೇ ಕೇಂದ್ರ ಸಚಿವ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿದರು.

ದಲಿತ ಮುಖಂಡ ಕಣಿವಿಹಳ್ಳಿ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಆರುಂಡಿ ಸುವರ್ಣ, ಜಿ.ನಂಜನಗೌಡ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.