ADVERTISEMENT

ವಿಜಯನಗರ | ಕೆಆರ್‌ಎಸ್‌ ಪಕ್ಷದಿಂದ ಜನಚೈತನ್ಯ ಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 8:26 IST
Last Updated 21 ಏಪ್ರಿಲ್ 2022, 8:26 IST
ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಸುದ್ದಿಗೋಷ್ಠಿ
ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಸುದ್ದಿಗೋಷ್ಠಿ   

ಹೊಸಪೇಟೆ (ವಿಜಯನಗರ): ‘ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದಿಂದ ರಾಜ್ಯದಾದ್ಯಂತ ‘ಕರ್ನಾಟಕ ಜನಚೈತನ್ಯ ಯಾತ್ರೆ’ ನಡೆಸಲು ತೀರ್ಮಾನಿಸಲಾಗಿದೆ’ ಎಂದು ‍ಪಕ್ಷದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ ದೊಡ್ಡಮನಿ ತಿಳಿಸಿದರು.

ಪಕ್ಷದ ರಾಜ್ಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಈ ಯಾತ್ರೆಯು ಮೊದಲ ಹಂತದಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ 28 ದಿನಗಳ ಕಾಲ ನಡೆಯಲಿದೆ. ಯಾತ್ರೆಯುದ್ದಕ್ಕೂ ಬಹಿರಂಗ ಸಭೆ, ಸುದ್ದಿಗೋಷ್ಠಿ, ಸರ್ಕಾರಿ ಕಚೇರಿಗಳಲ್ಲಿ ಲಂಚಮುಕ್ತ ಅಭಿಯಾನ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಭ್ರಷ್ಟಾಚಾರವನ್ನು ಜನರ ಮುಂದಿಡುವ ಕೆಲಸ ಮಾಡಲಾಗುವುದು ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಏ. 24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಯಾತ್ರೆಗೆ ಚಾಲನೆ ಸಿಗಲಿದೆ. ಜೆಡಿಯು ಪಕ್ಷದ ರಾಜ್ಯ ಅಧ್ಯಕ್ಷ ಮಹಿಮಾ ಪಟೇಲ್‌, ಡಬ್ಲ್ಯೂಪಿಐ ಪಕ್ಷದ ರಾಜ್ಯ ಅಧ್ಯಕ್ಷ ತಾಹಿರ್‌ ಹುಸೇನ್‌ ಸೇರಿದಂತೆ ಇತರೆ ಸಮಾನ ಮನಸ್ಕ ಪಕ್ಷಗಳ ಮುಖಂಡರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ADVERTISEMENT

1938ರ ಏಪ್ರಿಲ್‌ 25ರಂದು ಬ್ರಿಟಿಷರು ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥದಲ್ಲಿ ಗೋಲಿಬಾರ್‌ ನಡೆಸಿ ಅನೇಕರ ಸಾವಿಗೆ ಕಾರಣರಾಗಿದ್ದರು. ಅದರ ನೆನಪಿನಲ್ಲಿ ಏ. 25ರಂದು ಅಲ್ಲಿ ಹುತಾತ್ಮರ ಸ್ಮರಣಾ ಸಭೆ ಜರುಗಲಿದ್ದು, ಹುತಾತ್ಮರ ಕುಟುಂಬ ಸದಸ್ಯರು ಪಾಲ್ಗೊಳ್ಳುವರು. ಮೇ 21ರಂದು ತುಮಕೂರಿನಲ್ಲಿ ಸಮಾರೋಪಗೊಳ್ಳಲಿದೆ. ಬರಲಿರುವ ವಿಧಾನಸಭೆ ಚುನಾವಣೆ ಮುಗಿದ ನಂತರವೂ ಯಾತ್ರೆ ಮುಂದುವರೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಕೆಆರ್‌ಎಸ್‌ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಈಗಾಗಲೇ ಅನೇಕ ಭ್ರಷ್ಟರ ಭ್ರಷ್ಟಾಚಾರವನ್ನು ಬಯಲಿಗೆಳೆದು, ಅವರು ಜೈಲು ಸೇರುವಂತೆ ಮಾಡಿದೆ. ಇದು ನಿರಂತರವಾಗಿ ಮುಂದುವರೆಯಲಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ್‌, ಪರಿಶಿಷ್ಟ ಜಾತಿ/ಪಂಗಡ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಟಿ. ನಜೀರ್‌, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಈಡಿಗರ ಕರಿಬಸಪ್ಪ, ಯುವ ಘಟಕದ ರಾಜ್ಯ ಅಧ್ಯಕ್ಷ ವರುಣ್‌, ಪಿ. ಅಂಜಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.