ADVERTISEMENT

ಹೊಸಪೇಟೆ | ಅಭ್ಯರ್ಥಿ ಫೋಟೋ ನೋಡಿದರೆ ಸ್ಪಷ್ಟತೆ: ಬಸವರಾಜ ಬೊಮ್ಮಾಯಿ ಹೇಳಿಕೆ

ಬಿಜೆಪಿ ಸಮಾನ ಮನಸ್ಕರ ಸಭೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 15:36 IST
Last Updated 16 ಏಪ್ರಿಲ್ 2023, 15:36 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹೊಸಪೇಟೆ (ವಿಜಯನಗರ): ‘ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯ (ಎಚ್‌.ಆರ್‌.ಗವಿಯಪ್ಪ) ಫೋಟೋಗಳನ್ನು ತುಲನೆ ಮಾಡಿ ನೋಡಿದರೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಮತ ಹಾಕಬೇಕೆಂಬ ಸ್ಪಷ್ಟತೆ ಬರುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಸಮಾನ ಮನಸ್ಕರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಆದರೆ, ಸಿದ್ದಾರ್ಥ ಸಿಂಗ್‌ ಜೊತೆಗೆ ಅವರ ಭಾವಚಿತ್ರವಿಟ್ಟು ನೋಡಿದರೆ ಮೇ 10ರಂದು ಅಲ್ಲ, ಈಗಲೇ ಕಮಲಕ್ಕೆ ಮತ ಹಾಕಬೇಕೆಂಬ ಸ್ಪಷ್ಟತೆ ಬರುತ್ತದೆ ಎಂದರು.

ಸಿದ್ದಾರ್ಥ ಸಿಂಗ್‌ ಅವರಲ್ಲಿ ದೂರದೃಷ್ಟಿಯ ಗುಣಗಳಿವೆ. ಎಲ್ಲರನ್ನೂ ಅಪ್ಪಿಕೊಳ್ಳುವ ಸ್ವಭಾವವಿದೆ. ರಜಪೂತರಿಗೆ ಮೀಸೆ, ಅದರ ಮೇಲೆ ಪೇಟ ಹಾಗೂ ಅಧಿಕಾರ ಸಿಕ್ಕರೆ ಬೇರೆ ತರಹ ಇರುತ್ತಾರೆ. ಆದರೆ, ಸಿದ್ದಾರ್ಥ ಹಾಗಲ್ಲ. ಬಹಳ ಸರಳ ವ್ಯಕ್ತಿ. ಸಮಸ್ಯೆಗಳನ್ನು ಅರಿತು ಪರಿಹಾರ ಕೊಡುವ ಯೋಚನೆಗಳಿವೆ. ಆನಂದ್‌ ಸಿಂಗ್‌ ಶೇರ್‌ (ಹುಲಿ) ಆದರೆ, ಸಿದ್ದಾರ್ಥ ಸಿಂಗ್‌ ಸವ್ವಾ ಶೇರ್‌ (ದೊಡ್ಡ ಹುಲಿ). ಇಬ್ಬರಲ್ಲೂ ಛಲ ಇದೆ. ಆನಂದ್‌ ಸಿಂಗ್‌ ಅವರ ಕನಸು, ಕ್ಷೇತ್ರದ ಜನರ ಬೇಕು ಬೇಡಿಕೆಗಳಿಗೆ ಸ್ಪಂದಿಸಿ ಕ್ಷೇತ್ರದಲ್ಲಿ ಮಾದರಿ ಕೆಲಸ ಸಿದ್ದಾರ್ಥ ಸಿಂಗ್‌ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ನುಡಿದರು.

ADVERTISEMENT

ಇತ್ತೀಚೆಗೆ ಸಭೆ ಸೇರಿದಾಗ ಆನಂದ್‌ ಸಿಂಗ್‌ ನನ್ನ ಮಗನಿಗೆ ‘ಪವರ್‌ ಪಾಲಿಟಿಕ್ಸ್‌’ಗೆ ಬಿಟ್ಟು, ನಾನು ‘ಪಬ್ಲಿಕ್‌ ಪಾಲಿಟಿಕ್ಸ್‌’ ಮಾಡುವೆ ಎಂದು ಹೇಳಿದರು. ನಿಜವಾಗಿಯೂ ಸಿದ್ದಾರ್ಥ ಸಿಂಗ್‌ ಭರವಸೆ ಮೂಡಿಸಿದ್ದಾರೆ. ಇವರದು ‘ಕ್ಲೀನ್‌ ಸ್ಲೇಟ್‌’ ಇದೆ. ಅದರ ಮೇಲೆ ಏನು ಬರೆಯುತ್ತಾರೆ ಅದು ಶಾಶ್ವತವಾಗಿ ಉಳಿಯುತ್ತದೆ. ಸದ್ವಿಚಾರ, ಸಹಬಾಳ್ವೆ, ಕಠಿಣ ಪರಿಶ್ರಮವಿದ್ದರೆ ಜನರ ವಿಶ್ವಾಸ ಗಳಿಸಲು ಸಾಧ್ಯ. ಒಂದು ಲಕ್ಷ ಮತ ಗಳಿಸುವ ಮಿಷನ್‌ ಸಾಧಿಸಬಹುದು. ಆಗ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದರು.

ಆನಂದ್‌ ಸಿಂಗ್‌ ಅವರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಿಜಯನಗರ ಜಿಲ್ಲೆ ರಚಿಸಿ, ಅದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಲು ಕೆಲಸ ಮಾಡಿದ್ದಾರೆ. ವಿದೇಶಿ ಪ್ರವಾಸಿಗರು ಹಂಪಿಗೆ ಸುಲಭವಾಗಿ ಬಂದು ಹೋಗಲು ಸಚಿವರಾಗಿ ಶ್ರಮಿಸಿದ್ದಾರೆ. ಅವರು ದೂರದೃಷ್ಟಿಯ ರಾಜಕಾರಣಿ ಎಂದು ಕೊಂಡಾಡಿದರು.

ಸಚಿವ ಆನಂದ್‌ ಸಿಂಗ್‌ ಮಾತನಾಡಿ, ವಿಜಯನಗರ ಜಿಲ್ಲೆ ಮಾಡಿ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಕೋರಿದರು.

ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಕಾಸೆಟ್ಟಿ ಉಮಾಪತಿ ಹಾಜರಿದ್ದರು.

‘ಆನಂದ್‌ ಸಿಂಗ್‌ ಗ್ಯಾರಂಟಿ ಕೆಲಸಕ್ಕೆ ನಾನೇ ವಾರಂಟಿ’

‘ಸಚಿವ ಆನಂದ್‌ ಸಿಂಗ್‌ ಅವರು ಮಾಡಿದ ಗ್ಯಾರಂಟಿ ಕೆಲಸಗಳಿಗೆ ನಾನೇ ವಾರಂಟಿ’ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಹೇಳಿದರು.

‘ನಾನು ಗೆದ್ದ ನಂತರ ಆನಂದ್‌ ಸಿಂಗ್‌ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ರಾಜ್ಯ, ಕೇಂದ್ರ ಸರ್ಕಾರದ ಡಬಲ್‌ ಎಂಜಿನ್‌ ಮಾದರಿಯಲ್ಲಿ ನಾನು ಹಾಗೂ ಆನಂದ್‌ ಸಿಂಗ್‌ ಅವರು ಡಬಲ್‌ ಎಂಜಿನ್‌ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಮೆಡಿಕಲ್‌, ನರ್ಸಿಂಗ್‌, ಎಂಜಿನಿಯರಿಂಗ್‌, ಡೆಂಟಲ್‌, ಪಾಲಿಟೆಕ್ನಿಕ್‌, ಕಾನೂನು ಕಾಲೇಜು ತರಲು ಶ್ರಮಿಸುವೆ. ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸಿದ್ದು, ಕಾಲುವೆಗಳ ಮೂಲಕ ಹೊಲಗಳಿಗೆ ನೀರು ಹರಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.