ಹೊಸಪೇಟೆ (ವಿಜಯನಗರ): ಬಿಜೆಪಿ ಸಂಸ್ಥಾಪನಾ ದಿನವನ್ನು ನಗರದ ಕಾರ್ಯಕರ್ತರ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸುವ ಮೂಲಕ ಭಾನುವಾರ ಆಚರಿಸಲಾಯಿತು.
ರಾಣಿಪೇಟೆಯಲ್ಲಿರುವ ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಮನೆ ಮೇಲೆ ಪಕ್ಷದ ಧ್ವಜ ಹಾರಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ‘12 ಕೋಟಿ ಸದಸ್ಯತ್ವ ಹೊಂದಿರುವ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ನಮ್ಮದು. ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ನರೇಂದ್ರ ಮೋದಿ ಸೇರಿದಂತೆ ಅನೇಕರು ಶ್ರಮಿಸಿದ್ದಾರೆ’ ಎಂದರು.
ಸರ್ಕಾರ ವಿಫಲ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮಿತಿ ಮೀರಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಅದರೆ, ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಬಿಜೆಪಿ ಕಾರ್ಯಕರ್ತ ವಿನಯ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.
‘ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಜೆಡಿಎಸ್ ಅಂತರ ಕಾಯ್ದುಕೊಂಡಿಲ್ಲ’ ಎಂದ ಅವರು, ‘ಗುತ್ತಿಗೆದಾರರು, ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಧಿವೇಶನದ ಇತಿಹಾಸದಲ್ಲಿ ನಾಚಿಕೆ ಆಗುವಂತಹ ವಿಷಯಗಳು ಚರ್ಚೆ ಆಗಿವೆ. ಇದೆಲ್ಲವನ್ನೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬಿಜೆಪಿಯೇ ಅವರಿಗೆ ಭರವಸೆಯ ಬೆಳಕಾಗಿದೆ’ ಎಂದರು.
ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಂಸದ ನಾರಾಯಣಸ್ವಾಮಿ ಇದ್ದರು.
ಬಿಜೆಪಿ ಕಚೇರಿಯಲ್ಲಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ್ ರೆಡ್ಡಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ರೇವಣ್ಣಸಿದ್ಧಪ್ಪ, ಚಂದ್ರು ದೇವಲಾಪುರ, ಹೊನ್ನೂರಪ್ಪ, ನಾಗೇಂದ್ರ, ನಟರಾಜ, ಉಮಾದೇವಿ, ಪೂರ್ಣಿಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.