ಹೊಸಪೇಟೆ (ವಿಜಯನಗರ): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವೇ ಅಂಬೇಡ್ಕರ್ ಆಗಬೇಕೆಂದು ಹೊರಟಿದ್ದಾರೆ. ಇದು ಅವರ ಹಗಲುಗನಸು ಮಾತ್ರ. ಒಂದು ಸಮುದಾಯವನ್ನು ಎತ್ತಿಕಟ್ಟಿ ಒಡೆದು ಆಳುವ ಬ್ರಿಟಿಷ್ ಪದ್ಧತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದು ಡಿಸಿಎಂ ಆಡಿದ್ದಾರೆಂದು ಆರೋಪಿಸಿ ಬಿಜೆಪಿ ವತಿಯಿಂದ ಬುಧವಾರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದರು.
‘ಕಾಂಗ್ರೆಸ್ ಈಗಾಗಲೇ 75ಕ್ಕೂ ಅಧಿಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಅಮಿತ್ ಷಾ, ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗಳನ್ನು ತಿರುಚಿ ದೇಶದಲ್ಲಿ ಗುಲ್ಲೆಬ್ಬಿಸಿದ ಕಾಂಗ್ರೆಸ್ ಇದೀಗ ಡಿಕೆಶಿ ಅವರ ಹೇಳಿಕೆಗಾಗಿ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಿಬಿಐ ತನಿಖೆಯಾಗಲಿ: ಹನಿಟ್ರ್ಯಾಪ್ ವಿಚಾರದಲ್ಲಿ ಕುರ್ಚಿ ಉಳಿಸಿಕೊಳ್ಳುವ ತಂತ್ರ ಇದೆ. 48 ಜನರ ಸಿ.ಡಿ ಅಷ್ಟೇ ಅಲ್ಲ, ರಾಜ್ಯ, ರಾಷ್ಟ್ರ ನಾಯಕರ ಸಿ.ಡಿಗಳು ಕೂಡಾ ಇವೆ ಎನ್ನಲಾಗುತ್ತಿದೆ. ಸಿ.ಡಿ, ಹನಿಟ್ರ್ಯಾಪ್ ಕುರಿತು ಸಿಬಿಐ ತನಿಖೆಯಾದರೆ ಮಾತ್ರ ಸತ್ಯ ಬಹಿರಂಗವಾಗಲು ಸಾಧ್ಯ ಎಂದರು.
ಪಕ್ಷದ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆ ವಿಜಯಲಕ್ಷ್ಮಿ, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ವಕ್ತಾರ ಅಶೋಕ್ ಜೀರೇ, ರಾಜ್ಯ ಎಸ್‌ಟಿ ಮೋರ್ಚಾ ಸದಸ್ಯ ಕಾಸೆಟ್ಟಿ ಉಮಾಪತಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ನಗರಸಭೆಯ ಅಧ್ಯಕ್ಷ ರೂಪೇಶ್ ಕುಮಾರ್, ನಗರ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಇತರರು ಇದ್ದರು.
ಡಿಕೆಶಿ ಅವರ ಭಿತ್ರಿಚಿತ್ರ ಹಿಡಿದು ಧಿಕ್ಕಾರ ಕೂಗಿದ ಕಾರ್ಯಕರ್ತರು, ಕೊನೆಯಲ್ಲಿ ಭಿತ್ತಿಪತ್ತಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.