ADVERTISEMENT

ಹೊಸಪೇಟೆ: ‘ಕೆ‍ಪೆಕ್‌’ನಿಂದ ಕಂದು ಕ್ರಾಂತಿ ಆರಂಭ

ಪಿಎಂಎಫ್‌ಎಂಇ ಯೋಜನೆ: ಜಿಲ್ಲೆಯಲ್ಲಿ ಕಡಿಮೆ ಫಲಾನುಭವಿಗಳು–ಬೇಸರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:21 IST
Last Updated 14 ಆಗಸ್ಟ್ 2025, 5:21 IST
ಹೊಸಪೇಟೆಯಲ್ಲಿ ಬುಧವಾರ ಪಿಎಂಎಫ್‌ಎಂಇ ಯೋಜನೆಯಿಂದ ಪ್ರಯೋಜನ ಪಡೆದು ಯಶಸ್ವಿ ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸಿದ ಸತೀಶ್‌ ಕುಮಾರ್ ಪದಕಿ, ಶಿವಕುಮಾರ್ ಮತ್ತು ಆನಂದ ಸಜ್ಜನ್ ಅವರನ್ನು ‘ಕೆಪೆಕ್’ ಎಂಡಿ ಶಿವಪ್ರಕಾಶ್‌, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮತ್ತು ಇತರರು ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ಪಿಎಂಎಫ್‌ಎಂಇ ಯೋಜನೆಯಿಂದ ಪ್ರಯೋಜನ ಪಡೆದು ಯಶಸ್ವಿ ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸಿದ ಸತೀಶ್‌ ಕುಮಾರ್ ಪದಕಿ, ಶಿವಕುಮಾರ್ ಮತ್ತು ಆನಂದ ಸಜ್ಜನ್ ಅವರನ್ನು ‘ಕೆಪೆಕ್’ ಎಂಡಿ ಶಿವಪ್ರಕಾಶ್‌, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮತ್ತು ಇತರರು ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದ್ದು, ರೈತರು, ಉತ್ಸಾಹಿ ಉದ್ಯಮಿಗಳು ಇದರ ಪ್ರಯೋಜನ ಪಡೆಯಬೇಕು, ಅವರ ಆಸಕ್ತಿಗೆ ತಕ್ಕಂತೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದಿಂದ (ಕೆಪೆಕ್‌) ‘ಕಂದು ಕ್ರಾಂತಿ’ ಆರಂಭವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿರಿಧಾನ್ಯಗಳಿಂದ ಕಂದು ಕ್ರಾಂತಿ ನಿಶ್ಚಿತವಾಗಿ ಸಾಧ್ಯವಿದೆ. ಅವುಗಳನ್ನು ಸಂಸ್ಕರಿಸಿದರೆ ಮೌಲ್ಯವರ್ಧನೆ ಆಗಿದೆ ಮೂರರಿಂದ ನಾಲ್ಕು ಪಟ್ಟು ಅಧಿಕ ಆದಾಯ ಸಿಗುತ್ತದೆ. ಹೆದ್ದಾರಿಗಳ ಬದಿಗಳಲ್ಲಿ ಸಾಕಷ್ಟು ಆಹಾರ ಮಳಿಗೆಗಳನ್ನು ಹಾಕಬಹುದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರು, ಉದ್ಯಮಿಗಳು ಇದರ ಬಗ್ಗೆ ತಿಳಿದುಕೊಳ್ಳಬೇಕು, ಆಸಕ್ತಿ ತೋರಿಸುವವರಿಗೆ ಯಾವುದೇ ಕಷ್ಟವಿಲ್ಲದೆ, ತ್ವರಿತವಾಗಿ ಶೇ 50ರಷ್ಟು ಸಬ್ಸಿಡಿಯೊಂದಿಗೆ ಬ್ಯಾಂಕ್‌ನಿಂದ ಸಾಲ ದೊರಕಿಸುವ ಕೆಲಸವನ್ನು ನಿಗಮ ಮಾಡಲಿದೆ’ ಎಂದು ಅವರು ಭರವಸೆ ನೀಡಿದರು.

ADVERTISEMENT

‘ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸಲು ರಾಜ್ಯಾದ್ಯಂತ 2,000 ಘಟಕಗಳಿಗೆ ಬ್ಯಾಂಕ್‌ಗಳಿಂದ ಸಬ್ಸಿಡಿ ಸಹಿತ ಸಾಲಗಳನ್ನು ನೀಡಲಾಗಿದೆ. ಕೋಲ್ಡ್ ಪ್ರೆಸ್ಡ್ ಆಯಿಲ್ ಘಟಕಗಳಿಗೆ 1,200 ಘಟಕಗಳಿಗೆ ಸಬ್ಸಿಡಿ ನೀಡಲಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಆಹಾರ ಬೆಳೆಯುವುದು ಸುಲಭ, ಸಂಗ್ರಹಿಸಿ, ಸಂಸ್ಕರಿಸುವುದೇ ಈಗ ಕಷ್ಟವಾಗಿದೆ, ರೈತರು ಸ್ವಾವಲಂಬಿಗಳಾಗಿ, ತಮ್ಮ ಉತ್ಪನ್ನಗಳನ್ನು ತಾವೇ ಸಂಸ್ಕರಿಸಿ, ಬ್ರ್ಯಾಂಡಿಂಗ್ ಮಾಡುವ ಮಟ್ಟಕ್ಕೆ ಬೆಳೆಯಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಂದಲೂ ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ ಸಾಲ ಪಡೆದು ಕಿರು ಉದ್ಯಮ ಸ್ಥಾಪಿಸುವುದು ಸಾಧ್ಯವಿದೆ, ಆಗ ಬ್ಯಾಂಕ್‌ಗಳಿಗೆ ಅವಲಂಬಿಸುವುದು ತಪ್ಪುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್ ಅವರು ಜಿಲ್ಲೆಯ ಕಿರು ಆಹಾರ ಸಂಸ್ಕರಣೆಯ ಚಿತ್ರಣ ನೀಡಿದರೆ, ಲೀಡ್‌ ಬ್ಯಾಂಕ್‌ ಪ್ರಬಂಧಕ ವೀರೇಂದ್ರ ಕುಮಾರ್ ಅವರು ದಾಖಲೆಗಳು ಸಮರ್ಪಕವಾಗಿದ್ದರೆ ಯಾವುದೇ ಕಾರಣಕ್ಕೂ ಸಾಲ ನೀಡಿಕೆಯಲ್ಲಿ ವಿಳಂಬ ಆಗುವುದಿಲ್ಲ ಎಂದು ಭರವಸೆ ನೀಡಿದರು. ಹಗರಿ ಕೃಷಿ ಕಾಲೇಜಿನ ಪ್ರಾಧ್ಯಾಪಕಿ ಶಿಲ್ಪಾ ಎಚ್‌. ಅವರು ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಅವಕಾಶಗಳ ಕುರಿತು ಮಾಹಿತಿ ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಕೆ.ನಯೀಮ್ ಪಾಷ, 'ಕೆಪೆಕ್' ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು ವಿಜಯಕುಮಾರ್ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮನೋಹರ ಗೌಡ, ಕೃಷಿ ಅಧಿಕಾರಿ ವೆಂಕಟೇಶ ಎಲ್‌., ಹಡಗಲಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನ ಡಾ.ಮಂಜುನಾಥ ಬಾನವಳಿ ಇತರರು ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ರೈತರು, ಉದ್ಯಮಿಗಳು ಹಲವು ಪ್ರಶ್ನೆಗಳನ್ನು ಕೇಳಿ ಸಂಶಯ ಬಗೆಹರಿಸಿಕೊಂಡರು.

ಕೇವಲ 320 ಅರ್ಜಿ

ವಿಜಯನಗರ ಜಿಲ್ಲೆಯಲ್ಲಿ ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ ಕೇವಲ 320 ಅರ್ಜಿಗಳು ಆನ್‌ಲೈನ್‌ನಲ್ಲಿ ಸ್ವೀಕೃತವಾಗಿವೆ. ಈ ಪೈಕಿ 221 ಅರ್ಜಿಗಳ ಹಾರ್ಡ್ ಪ್ರತಿ ಪಡೆಯಲಾಗಿದೆ. ಇದರಲ್ಲಿ 206 ಅರ್ಜಿಗಳು ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸಲಾಗಿದೆ. ಇದರಲ್ಲಿ 196 ಅರ್ಜಿಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. 92 ಫಲಾನುಭವಿಗಳಿಗೆ ಸಾಲ ಮಂಜೂರಾತಿ 82 ಮಂದಿಗೆ ಸಾಲ ವಿತರಿಸಲಾಗಿದೆ. ಒಟ್ಟು ಯೋಜನಾ ವೆಚ್ಚ ₹7.48 ಕೋಟಿ ಇದ್ದು ಕೇಂದ್ರದಿಂದ ₹1.48 ಕೋಟಿ ರಾಜ್ಯದಿಂದ ₹1.48 ಕೋಟಿ ಸಬ್ಸಿಡಿ ವಿತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್‌ ಮಾಹಿತಿ ನೀಡಿದರು.

ಬೇರೆ ಜಿಲ್ಲೆಗಳಲ್ಲಿ 1000ಕ್ಕಿಂತ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ ವಿಜಯನಗರ ಜಿಲ್ಲೆ ಹಿಂದೆ ಬಿದ್ದಿದೆ ಮಾರ್ಚ್ 31ಕ್ಕೆ ಯೋಜನೆ ಕೊನೆಗೊಳ್ಳುತ್ತದೆ
-ಶಿವಕುಮಾರ್, ಎಂಡಿ ಕೆಪೆಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.