ADVERTISEMENT

ವಿಜಯನಗರ|ನಗರ ಪ್ರವೇಶಿಸುವ ವೃತ್ತಕ್ಕೆ ಬುದ್ಧನ ಹೆಸರಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:22 IST
Last Updated 12 ಮೇ 2025, 14:22 IST
ಹೊಸಪೇಟೆಗೆ ನಗರ ಪ್ರವೇಶಿಸುವ ಗುರು ಕಾಲೇಜ್ ಬಳಿಯ ವೃತ್ತಕ್ಕೆ ಸೋಮವಾರ ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂಬ ನಾಮಕರಣ ಮಾಡಲಾಯಿತು
ಹೊಸಪೇಟೆಗೆ ನಗರ ಪ್ರವೇಶಿಸುವ ಗುರು ಕಾಲೇಜ್ ಬಳಿಯ ವೃತ್ತಕ್ಕೆ ಸೋಮವಾರ ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂಬ ನಾಮಕರಣ ಮಾಡಲಾಯಿತು   

ಹೊಸಪೇಟೆ (ವಿಜಯನಗರ): ಬುದ್ಧ ಪೂರ್ಣಿಮೆ ಪ್ರಯುಕ್ತ ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ವತಿಯಿಂದ ನಗರದ ಹೊರವಲಯದ ಗುರು ಪಿ.ಯು. ಕಾಲೇಜು ಹತ್ತಿರ ನಾಲ್ಕು ರಸ್ತೆಗಳು ಸಂಧಿಸುವ ವೃತ್ತಕ್ಕೆ ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂದು ನಾಮಕರಣ ಮಾಡಲಾಗಿದೆ.

‘ಹೊಸಪೇಟೆ ಶಾಂತಿಗೆ ಹೆಸರಾದ ನಗರ, ಇದು ಆರಂಭ ಆಗುವುದೇ ಈ ವೃತ್ತದಿಂದ, ಹಾಗಾಗಿ ಇಡೀ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧನ ಹೆಸರನ್ನು ಈ ವೃತ್ತಕ್ಕೆ ಇಡಲಾಗಿದೆ’ ಎಂದು ಟ್ರಸ್ಟ್‌ನ ಪ್ರಮುಖರಾದ ಸೋಮಶೇಖರ ಬಣ್ಣದಮನೆ ತಿಳಿಸಿದರು.

ವಿಶ್ವ ಗುರು, ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ ವೃತ್ತ ನಂತರ ಇದ್ದು, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವೃತ್ತ ಬಳಿಕ ಸಿಗುತ್ತದೆ. ಈ ಮೂವರು ಮಹಾನಾಯಕರ ವೃತ್ತಗಳು ಒಂದೇ ರಸ್ತೆಯಲ್ಲಿ ಬರುವುದು ವಿಶೇಷ ಎಂದು ಅವರು ಹೇಳಿದರು.

ADVERTISEMENT

ಬಳಿಕ ಜಿಲ್ಲಾಧಿಕಾರಿ, ವಿಜಯನಗರ ಕ್ಷೇತ್ರ ಶಾಸಕ ಎಚ್.ಆರ್. ಗವಿಯಪ್ಪ, ನಗರಸಭಾ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ, ಅಧಿಕೃತವಾಗಿ ಸಿದ್ದಾರ್ಥ ಗೌತಮ ಬುದ್ಧ ವೃತ್ತವನ್ನು ಘೋಷಣೆ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ಸಿಎಂ ಸಹಿತ ಹಲವು ಸಚಿವರಿಗೆ ಮನವಿ ಕಳುಹಿಸಿಕೊಡಲಾಯಿತು.‌ ವೃತ್ತದ ಅಭಿವೃದ್ಧಿಗೆ ಹೈಮಾಸ್ಟ್ ವಿದ್ಯುತ್‌ ದೀಪದ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗೆ ಒತ್ತಾಯಿಸಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ, ಮರಡಿ ಜಂಬಯ್ಯ ನಾಯಕ, ಸಣ್ಣ ಮಾರಪ್ಪ, ಸ್ಲಂ ವೆಂಕಿ, ಶಿವಕುಮಾರ್, ಕೊಳಗಲ್ ಸೂರ್ಯನಾರಾಯಣ, ರಾಮಚಂದ್ರ ಬಾಬು, ಸಣ್ಣ ಈರಪ್ಪ, ವೀರಭದ್ರ ನಾಯಕ್, ಬಿಸಾಟಿ ಮಹೇಶ್ ಇದ್ದರು.

‘ಪ್ರತಿಮೆಗಿಂತ ಶಾಂತಿ ಅಹಿಂಸೆ ನೆಲೆಸಲಿ‘

ಬಹುತೇಕರ ಮನೆಗಳಲ್ಲಿ ಬುದ್ಧನ ಪ್ರತಿಮೆಗಳನ್ನು ಇರಿಸಲಾಗಿದೆ. ಆದರೆ ಅಶಾಂತಿ ಮತ್ತು ಹಿಂಸಾತ್ಮಕ ವಾತಾವರಣಗಳೇ ಹೆಚ್ಚಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮನೆ ಮನಗಳಲ್ಲಿ ಶಾಂತಿ ಅಹಿಂಸೆ ನೆಲೆಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು. ತಮ್ಮ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರಸಭೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಭಗವಾನ್ ಬುದ್ಧ ಜಯಂತಿಯಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಸೋಮವಾರ ಮಾತನಾಡಿದರು. ಪ್ರಗತಿಪರ ಚಿಂತಕ ಸಾಹಿತಿ ಬಿ.ಪೀರ್ ಬಾಷಾ ಅವರು ಭಗವಾನ್ ಬುದ್ಧನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎಡಿಸಿ ಇ.ಬಾಲಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.