ADVERTISEMENT

ಬಜೆಟ್‌: ಹಂಪಿಗೆ ₹115 ಕೋಟಿ ಕೊಡಿ

ಹಣಕಾಸು ಸಚಿವೆ ನಿರ್ಮಲಾಗೆ ಸಂಸದ ಇ.ತುಕಾರಾಂ ಪತ್ರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:40 IST
Last Updated 20 ಜನವರಿ 2026, 2:40 IST
ಇ.ತುಕಾರಾಂ
ಇ.ತುಕಾರಾಂ   

ಹೊಸಪೇಟೆ (ವಿಜಯನಗರ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದು, ಡಿಸೆಂಬರ್‌ ಮೂರನೇ ವಾರ ಹಂಪಿಯಲ್ಲೇ ಎರಡು ದಿನ ತಂಗಿ ಬಜೆಟ್ ತಯಾರಿ ಸಭೆ ನಡೆಸಿದ್ದರು. ಅದಕ್ಕಿಂತ ಒಂದು ವಾರ ಮೊದಲಾಗಿ (ಡಿ.15) ಸಂಸದ ಇ.ತುಕಾರಾಂ ಅವರು ಸಚಿವರಿಗೆ ಪತ್ರ ಬರೆದು, ಈ ಬಜೆಟ್‌ನಲ್ಲಿ ಹಂಪಿಗೆ ₹115 ಕೋಟಿ ಒದಗಿಸಲು ಒತ್ತಾಯಿಸಿದ್ದಾರೆ.

ಇದರ ಜತೆಗೆ ಈ ಬಜೆಟ್‌ನಲ್ಲಿ ಹಂಪಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ವಿಶೇಷ ಅರ್ಪಿತ ಅನುದಾನವನ್ನು ತೆಗೆದಿರಿಸಬೇಕು ಹಾಗೂ ರಾಜ್ಯ ಸರ್ಕಾರದೊಂದಿಗೆ ಸೇರಿಕೊಂಡು ಜಂಟಿ ತಾಂತ್ರಿಕ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸದರು ಬರೆದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ದೇಶದ ಅತ್ಯಂತ ದೊಡ್ಡ ಪುರಾತತ್ವ ಸ್ಥಳವಾಗಿರುವ (41.8 ಚದರ ಕಿ.ಮೀ.) ಹಂಪಿಯ ಸುಸ್ಥಿರ ಅಭಿವೃದ್ಧಿಗೆ ಈ ಹಿಂದೆ ಕೈಗೆತ್ತಿಕೊಂಡಿದ್ದ ಯೋಜನೆಗಳು ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವುದನ್ನು ಉಲ್ಲೇಖಿಸಿದ್ದಾರೆ.

ADVERTISEMENT

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಂಪಿ ಸುತ್ತಮುತ್ತಲಿನ 58 ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ಹೊಂದಿದ್ದರೆ, ರಾಜ್ಯದ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ  41.8 ಚ.ಕಿ.ಮೀ.ವ್ಯಾಪ್ತಿಯಲ್ಲಿನ 1,600ರಷ್ಟು ಸ್ಮಾರಕಗಳ ಸಂರಕ್ಷಣೆಯ ಹೊಣೆಗಾರಿಕೆ ಇದೆ. ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರಕ್ಕೆ (ಹವಾಮ) 236 ಚ.ಕಿ.ಮೀ ವ್ಯಾಪ್ತಿಯಲ್ಲಿನ ಕೋರ್‌, ಬಫರ್‌, ಫೆರಿಪೆರಲ್‌ ವಲಯಗಳ ಒಟ್ಟಾರೆ ಸಂರಕ್ಷಣೆಯ ಹೊಣೆಗಾರಿಕೆ ಇದೆ. ಹೀಗಾಗಿ ಈ ವರ್ಷದ ಬಜೆಟ್‌ನಲ್ಲಿ ₹115 ಕೋಟಿ ಅನುದಾನವನ್ನು ಹಂಪಿಗೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಎಎಸ್‌ಐ ಮತ್ತು ರಾಜ್ಯ ಹೊಣೆಗಾರಿಕೆಯ ಸ್ಮಾರಕಗಳ ಸಂರಕ್ಷಣೆಗೆ ಪ್ರತಿ ವರ್ಷ ₹15 ಕೋಟಿಯಂತೆ 10 ವರ್ಷದಲ್ಲಿ ₹150 ಕೋಟಿ, ಪ್ರವಾಸಿಗರಿಗೆ ವಿವಿಧ ಸೌಲಭ್ಯಗಳಿಗಾಗಿ ₹50 ಕೋಟಿಯಂತೆ ಮೂರು ವರ್ಷಕ್ಕೆ ₹150 ಕೋಟಿ ಹಾಗೂ ಹಂಪಿ ಸುತ್ತಮುತ್ತಲಿನ 28 ಗ್ರಾಮಗಳು ಹಾಗೂ ಕಮಲಾಪುರ ಪುರಸಭೆಯಲ್ಲಿನ ಮೂಲಸೌಲಭ್ಯಗಳ ಅಭಿವೃದ್ಧಿಗೆ ₹50 ಕೋಟಿಯಂತೆ ಆರು ವರ್ಷಕ್ಕೆ ₹300 ಕೋಟಿ ಒದಗಿಸಬೇಕು, ಕೊನೆಯ ಅನುದಾನವನ್ನು ರಾಜ್ಯ ಅನುದಾನ ಜತೆಗೆ ಹಂಚಿಕೊಂಡು ಬಳಸಬಹುದು ಎಂದು ಸಂಸದರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೋಜನೆಗಳ ಏಳು ಬೀಳು

1975ರಲ್ಲಿ ಜಾರಿಗೆ ತರಲಾದ ಹಂಪಿ ಮೇಲಿನ ರಾಷ್ಟ್ರೀಯ ಯೋಜನೆಯಿಂದಾಗಿ 1986ರಲ್ಲಿ ಹಂಪಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿತು. 2008–09ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರವು ರಾಜ್ಯಕ್ಕೆ ಅನುದಾನ ನೀಡಿದರೂ ರಾಜ್ಯದಿಂದ ಸಮಾನವಾಗಿ ಅನುದಾನ ಹಂಚಿಕೆ ಆಗಲಿಲ್ಲ ಹೀಗಾಗಿ ಯೋಜನೆಗಳು  ಇಂದಿಗೂ ಪೂರ್ಣಗೊಂಡಿಲ್ಲ. 2017–18ರ ಬಜೆಟ್‌ ಭಾಷಣದಲ್ಲಿ ಹಂಪಿಗೆ ಅನುದಾನ ನೀಡುವ ಮಾತು ಆಡಿದರೂ ಅನುದಾನ ಬರಲಿಲ್ಲ. ಆದರ್ಶ ಸ್ಮಾರಕ ಯೋಜನೆಯಡಿಯಲ್ಲಿ ಸಹ ಸಮರ್ಪಕವಾಗಿ ಅನುದಾನ ಬರಲೇ ಇಲ್ಲ. ‘ಪ್ರಸಾದ ಯೋಜನೆ’ ಅಡಿಯಲ್ಲಿ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾವ ಕಳುಹಿಸಲಿಲ್ಲ ಎಂಬುದನ್ನು ಸಂಸದರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.