ADVERTISEMENT

ನೂತನ ಜಿಲ್ಲೆ ಆಯವ್ಯಯವಾರದಲ್ಲಿ ವರದಿ ಸಲ್ಲಿಕೆ: ಅನಿರುದ್ಧ್ ಶ್ರವಣ್‌

ವಿಜಯನಗರ ಜಿಲ್ಲಾ ವಿಶೇಷ ಅಧಿಕಾರಿ ಅನಿರುದ್ಧ್ ಶ್ರವಣ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 10:27 IST
Last Updated 5 ಜೂನ್ 2021, 10:27 IST
ವಿಶ್ವ ಪರಿಸರದ ದಿನದ ಪ್ರಯುಕ್ತ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರು ಶನಿವಾರ ಹೊಸಪೇಟೆಯಲ್ಲಿ ಸಸಿ ನೆಟ್ಟು, ನೀರೆರೆದರು–ಪ್ರಜಾವಾಣಿ ಚಿತ್ರ
ವಿಶ್ವ ಪರಿಸರದ ದಿನದ ಪ್ರಯುಕ್ತ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರು ಶನಿವಾರ ಹೊಸಪೇಟೆಯಲ್ಲಿ ಸಸಿ ನೆಟ್ಟು, ನೀರೆರೆದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯವ್ಯಯ ವರದಿ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

ಶನಿವಾರ ನಗರ ಹೊರವಲಯದ ಸಂಚಾರ ಪೊಲೀಸ್‌ ಠಾಣೆ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಹರಿಹರ ರಸ್ತೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿ ನೆಟ್ಟು, ನೀರೆರೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ನೇಮಕ, ಜಿಲ್ಲೆಯ ಅಭಿವೃದ್ಧಿ ಕುರಿತು ಸಭೆ ನಡೆಸಲಾಗಿದೆ. ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ನೇಮಕ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಒಂದು ವಾರದಲ್ಲಿ ಜಿಲ್ಲೆಗೆ ಬೇಕಿರುವ ಬಜೆಟ್‌ ಕುರಿತು ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಒಟ್ಟು 53 ಇಲಾಖೆಗಳಿಗೆ ನೂತನ ಅಧಿಕಾರಿಗಳ ನೇಮಕ ಆಗಬೇಕಿದೆ. ಬಳ್ಳಾರಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ ಮಾಡಿರುವ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಹೊಸ ಜಿಲ್ಲೆಯ ಅಭಿವೃದ್ಧಿ ಕುರಿತು ಹಲವರು ಸಲಹೆ ನೀಡಿದ್ದಾರೆ. ಅವುಗಳನ್ನೆಲ್ಲ ಕ್ರೋಢೀಕರಿಸಿ ಬಜೆಟ್‌ ಗಾತ್ರ ತಯಾರಿಸಿ, ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ವಿಜಯನಗರ ಜಿಲ್ಲೆಗೆ ಸಂಬಂಧಿಸಿದ ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ, ‘ಕೋವಿಡ್–19 ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದರಿಂದ ಎಲ್ಲ ಕೆಲಸಗಳು ವಿಳಂಬವಾಗುತ್ತಿವೆ. ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದ ಕೂಡಲೇ ಚುರುಕಿನಿಂದ ಕೆಲಸ ಆರಂಭಿಸಲಾಗುವುದು. ವಿಜಯನಗರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಸಭೆ ನಡೆಸಿ, ಪ್ರಸ್ತಾವ ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ವರದಿ ಸಲ್ಲಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ, ವಲಯ ಅರಣ್ಯ ಅಧಿಕಾರಿ ಕೆ.ಸಿ.ವಿನಯ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಜಿ. ಶಿವಕುಮಾರ್, ದರೋಜಿ ಕರಡಿಧಾಮ ವಲಯ ಅರಣ್ಯ ಅಧಿಕಾರಿ ಉಷಾ, ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ್ ಸಜ್ಜನ್, ಧರ್ಮೇಂದ್ರ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.