ADVERTISEMENT

ಹಂಪಿ ಉತ್ಸವದಲ್ಲಿ ಎತ್ತುಗಳ ಪ್ರದರ್ಶನ: ರೈತ ಮಂಜುನಾಥರ ಹಳ್ಳಿಕಾರ ತಳಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 10:42 IST
Last Updated 2 ಫೆಬ್ರುವರಿ 2024, 10:42 IST
   

ಹಂಪಿ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಎತ್ತುಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಶುಕ್ರವಾರ ಆಯೋಜಿಸಿದ್ದ ಈ ಪ್ರದರ್ಶನದಲ್ಲಿ ಒಟ್ಟು 52 ಜೋಡಿ ಎತ್ತುಗಳು ಭಾಗವಹಿಸಿದ್ದವು.

ಅಮೃತ್‍ಮಹಲ್ 3 ಜೋಡಿ, ಕಿಲಾರಿ ಜಾತಿ 6 ಜೋಡಿ ಸೇರಿದಂತೆ ಉಳಿದ ಜೋಡಿಗಳೆಲ್ಲವು ಹಳ್ಳಿಕಾರ ತಳಿಗೆ ಸೇರಿದ್ದವು.

ADVERTISEMENT

ಎತ್ತಿಗೆ ಪೂಜೆ ಸಲ್ಲಿಸುವದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಪ್ರದರ್ಶನ ಉದ್ಘಾಟಿಸಿದರು. ಜಿಲ್ಲಾಡಳಿತ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ.

‘ಸ್ಥಳೀಯ ಆಡಳಿತವನ್ನು ಕಡೆಗಣಿಸಿಲ್ಲ. ಎಲ್ಲವುದು ಶಿಷ್ಟಾಚಾರ ಪ್ರಕಾರ ನಡೆಯುತ್ತಿದೆ’ ಎಂದು ಸಮರ್ಥಿಸಿಕೊಂಡರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಪ್ರದರ್ಶನ ವೀಕ್ಷಿಸಿ ಮಾತನಾಡಿ, ರೈತರನ್ನು ಪ್ರೋತ್ಸಾಹಿಸಲು ಪ್ರಸ್ತುತ ಪ್ರದರ್ಶನ ಏರ್ಪಡಿಸಿರುವುದಾಗಿ ತಿಳಿಸಿದರು.

ಹೊಸಪೇಟೆ ರೈತ ಆರ್. ಮಂಜುನಾಥ ಅವರ ಹಳ್ಳಿಕಾರ ತಳಿ ಜೋಡಿ ಎತ್ತುಗಳು ಚಾಂಪಿಯನ್ ಪಟ್ಟ ಪಡೆದು ಜಿಲ್ಲಾ ಉಸ್ತುವಾರಿ ಸಚಿವರಿಂದ ವೈಯಕ್ತಿವಾಗಿ ₹ 50ಸಾವಿರ ನಗದು ಬಹುಮಾನ ಪಡೆದವು.

ಬಂದಿ ಕೃಷ್ಣಪ್ಪ ಅವರ ಜೋಡಿ ಎತ್ತುಗಳು ಪ್ರಥಮ ಬಹುಮಾನದೊಂದಿಗೆ ₹10,000, ನಲ್ಲಾಪುರ ಟಿ. ಹನುಮಂತಪ್ಪ ಅವರ ಎತ್ತುಗಳು ದ್ವಿತೀಯ ಸ್ಥಾನ ಪಡೆದು ₹ 7,500 ಮತ್ತು ವೆಂಕಟಾಪುರ ಗ್ರಾಮದ ಕೆ. ಹುಲಿಗೇಶ್ ಅವರ ಎತ್ತುಗಳು ತೃತೀಯ ಸ್ಥಾನ ಪಡೆದು ₹ 5,000 ದೊಂದಿಗೆ ಪ್ರಮಾಣಪತ್ರ ಪಡೆದವು. ಅದೇ ರೀತಿ ಭಾಗವಹಿಸಿದ ಎಲ್ಲ ಎತ್ತುಗಳ ಮಾಲೀಕರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಇಂಗಳಿಗಿ ಗ್ರಾಮದ ರೈತ ದ್ಯಾವಣ್ಣ ಅವರ ‘ಆರ್ಮಿ ಹುಲಿ’, ‘ಅನ್ನದಾತ’ ಹೆಸರಿನ ಜೋಡಿ ಎತ್ತುಗಳ ಕೋಡಿಗೆ ಸುಮಾರು 9ರಿಂದ 10ಕೆ.ಜಿಯಷ್ಟು ವಿವಿಧ ಹೂವು, ಬಲೂನ್, ಲೆಡ್ ಬಲ್ಬು, ಚಿತ್ರಗಳಿಂದ ಅಲಂಕಾರ ಮಾಡಿದ್ದು, ಇಡೀ ಪ್ರದರ್ಶನದಲ್ಲಿ ಗಮನಸೆಳೆದವು.

ಪ್ರದರ್ಶನ ವೀಕ್ಷಿಸಿದ ವಿದೇಶಿಯರೂ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರದರ್ಶನದಲ್ಲಿ ಎತ್ತುಗಳಿಗೆ ಮೇವಿನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕ ಡಾ. ಕೃಷ್ಣಮೂರ್ತಿ, ವಿಜಯನಗರ ಉಪ ನಿರ್ದೇಶಕ ಹೋಮ್‍ಸಿಂಗ್, ಅಧಿಕಾರಿಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಡಾ. ಎಸ್.ಎಸ್. ಪಾಟೀಲ್, ಡಾ. ಎನ್. ಮಂಜುನಾಥ, ಡಾ. ರವಿ ಪ್ರಕಾಶ್ ಭಾಗವಹಿಸಿದ್ದರು.

ಬಿಸಿಲಿಗೂ ಜಗ್ಗದ ಉತ್ಸಾಹ

ಬಿರು ಬಿಸಿಲಿನಲ್ಲಿಯೂ ಎತ್ತುಗಳ ಪ್ರದರ್ಶನ ನಡೆಯಿತು. ಆದರೆ, ಸಂಜೆ 4ಕ್ಕೆ ಆಯೋಜಿಸಿದ್ದರೆ ಇನ್ನೂ ಹೆಚ್ಚಿನ ಜನರು ಕಣ್ತುಂಬಿಕೊಳ್ಳುತ್ತಿದ್ದರು ಎಂದು ಕೆಲವು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದೆ ನಡೆಯುವ ಶ್ವಾನ, ಟಗರು ಪ್ರದರ್ಶನ ವೇಳೆ ಬದಲಾಯಿಸುವಂತೆಯೂ ಕೆಲವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.