
ಹೊಸಪೇಟೆ (ವಿಜಯನಗರ): ಇದೀಗ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರು, ಲಿಂಗಾಯತರು, ಇತರ ಸಾಮಾನ್ಯ ವರ್ಗದವರು ತಾವು ಬೇಡ ಜಂಗಮರೆಂದು ಬರೆಸುತ್ತಿದ್ದು, ಇದನ್ನು ತಕ್ಷಣ ತಡೆಗಟ್ಟಬೇಕು, ಜಾತಿ ಪ್ರಮಾಣ ಪತ್ರ ನೋಡಿಯೇ ಬೇಡ ಜಂಗಮ ಪಟ್ಟಿಯಲ್ಲಿ ನಮೂದಿಸಬೇಕು ಎಂದು ಜಿಲ್ಲಾ ಮಾದಿಗ ಮಹಾಸಭಾದ ಮುಖಂಡ ಸಂತೋಷ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಬೇಡ ಜಂಗಮರು ಮೂಲತಃ ಆಂಧ್ರದಿಂದ ವಲಸೆ ಬಂದವರು. ಅವರ ಮಾತೃಭಾಷೆ ತೆಲುಗು ಮತ್ತು ಪಕ್ಕಾ ಮಾಂಸಾಹಾರಿಗಳು. ಚಾಪೆ ಹೆಣೆಯುವುದು ಅವರ ಕುಲ ಕಸುಬು. ಊರುಗಳಲ್ಲಿ ಭಿಕ್ಷೆಯನ್ನೂ ಇವರು ಬೇಡುತ್ತಾರೆ. ಹೀಗಿರುವಾಗ ವೀರಶೈವ ಜಂಗಮರು ಬೇಡ ಜಂಗಮ ಎಂದು ಬರೆಸುವುದು ಸರಿಯಲ್ಲ ಎಂದರು.
‘ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಮಾಹಿತಿಯನ್ನು ಗಣತಿಯಲ್ಲಿ ಸೇರಿಸಲು ಒತ್ತಡ ಹಾಕಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.
ಮಾದಿಗ ಮಹಸಭಾದ ಮುಖಂಡ ಎಂ.ಸಿ.ವೀರಸ್ವಾಮಿ ಮಾತನಾಡಿ, ಜಾತಿ ಸಮೀಕ್ಷೆಯಲ್ಲಿ 42 ಕಲಂಗಳಿದ್ದು, ಅದನ್ನು ತುಂಬಿಸುವುದು ಬಹಳ ವಿಳಂಬವಾಗುತ್ತಿದೆ. ಸಮೀಕ್ಷೆಯನ್ನು ಕಾಟಾಚಾರಕ್ಕೆ ನಡೆಸಿದಂತೆ ಕಾಣುತ್ತಿದೆ, ಇದರ ಬಗ್ಗೆ ಅಧಿಕಾರಿಗಳ ನಿಗಾ ವಹಿಸಬೇಕು ಎಂದರು.
ಮುಖಂಡರಾದ ಬಸವರಾಜ, ಶೇಷು, ಜಗನ್ನಾಥ, ಮಾಚಣ್ಣ, ಭರತ್‌ಕುಮಾರ್ ಸಿ.ಆರ್.ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.