ADVERTISEMENT

ಹೊಸಪೇಟೆ| ಸಿ.ಸಿ.ಟಿ.ವಿ. ಕೊರತೆಯಿಂದ ತನಿಖೆಗಳಿಗೆ ಹಿನ್ನಡೆ: ಎಸ್‌.ಜಾಹ್ನವಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 3:54 IST
Last Updated 20 ಅಕ್ಟೋಬರ್ 2025, 3:54 IST
<div class="paragraphs"><p>ಎಸ್‌.ಜಾಹ್ನವಿ</p></div>

ಎಸ್‌.ಜಾಹ್ನವಿ

   

ಹೊಸಪೇಟೆ (ವಿಜಯನಗರ): ನಗರದ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾಗಳ ಕೊರತೆ ಇದೆ, ಇದರಿಂದ ಅಪರಾಧ ಕೃತ್ಯಗಳನ್ನು ಬೇಗ ಪತ್ತೆಹಚ್ಚುವ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ, ಇದನ್ನು ಶೀಘ್ರ ನಿವಾರಿಸಿಕೊಳ್ಳುವ ಯತ್ನ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.

ಟಿ.ಬಿ.ಡ್ಯಾಂ ಕಾರ್ಯದರ್ಶಿಯವರ ಮನೆಯ ಆವರಣದಿಂದ ಭದ್ರತಾ ಸಿಬ್ಬಂದಿಯ ಕೈಕಾಲು ಕಟ್ಟಿ ಶ್ರೀಗಂಧದ ಮರ ಕದ್ದೊಯ್ದ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಯದರ್ಶಿ ಅವರ ಮನೆಯ ಬಳಿ ಸಿ.ಸಿ.ಟಿ.ವಿ.ಕ್ಯಾಮೆರಾ ಇಲ್ಲ, ಆದರೆ ಬೇರೆಡೆಯಲ್ಲಿ ಆರೋಪಿಗಳ ಚಲನವಲನ ಗೊತ್ತಾಗಿದೆ. ಹೀಗಾಗಿ ಒಂದೆರಡು ದಿನಗಳಲ್ಲೇ ಅವರನ್ನು ಪತ್ತೆಹಚ್ಚುವ ವಿಶ್ವಾಸ ಇದೆ ಎಂದರು.

ADVERTISEMENT

‘ನಗರದಲ್ಲಿ 300 ಕಡೆಗಳಲ್ಲಿ ಐಟಿಎಂಎಸ್‌ ಮತ್ತು ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್‌ಪಿ ಕಚೇರಿಯಲ್ಲೇ ಈ ಎಲ್ಲ ಕ್ಯಾಮೆರಾಗಳ ಕಮಾಂಡ್ ಕೇಂದ್ರ ಇರುತ್ತದೆ. ಇದಕ್ಕೆ ₹15ರಿಂದ ₹20 ಕೋಟಿ ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಯೋಜನೆಗೆ ಅನುಮತಿ ದೊರೆತರೆ ಅಪರಾಧ ಪತ್ತೆಹಚ್ಚುವ ಕೆಲಸ ಸುಲಭವಾಗುತ್ತದೆ’ ಎಂದು ಅವರು ವಿವರಿಸಿದರು.

‘ಈ ಹಿಂದೆ ರೂಪಿಸಿದ ಯೋಜನೆಯಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾಗಳ ಕಮಾಂಡ್‌ ಕೇಂದ್ರ ಒಂದೇ ಕಡೆ ಇರಲಿಲ್ಲ. ಅದರಿಂದ ನಿರೀಕ್ಷಿತ ಫಲ ಸಿಗುವುದಿಲ್ಲ. ಹೀಗಾಗಿ ಹೊಸ ಯೋಜನೆ ರೂಪಿಸಲಾಗಿದೆ. ಇದು ಸ್ವಲ್ಪ ದುಬಾರಿ ಎನಿಸಿದರೂ ಅಪರಾಧ ಕೃತ್ಯ ತಡೆಗಟ್ಟುವುದಕ್ಕೆ ಬಹಳ ಮಟ್ಟಿಗೆ ನೆರವಾಗಲಿದೆ. ಹಿರಿಯ ಅಧಿಕಾರಿಗಳೊಂದಿಗೆ ಇಲ್ಲಿನ ಅಗತ್ಯಗಳ ಬಗ್ಗೆ ಚರ್ಚಿಸಿ ಅವರಿಗೆ ಮನವರಿಕೆ ಮಾಡಲಾಗುವುದು’ ಎಂದು ಎಸ್‌ಪಿ ಹೇಳಿದರು.

ಕೊಲೆ ರಹಸ್ಯ ಬಯಲು: ನಗರದ ಮೇನ್‌ ಬಜಾರ್‌ ಬಳಿ ಪಾಳುಬಿದ್ದ ಕಟ್ಟಡದಲ್ಲಿ ಗೋಪಾಲಕೃಷ್ಣ ಎಂಬುವವರ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿದ್ದು ಸಹ ಪೊಲೀಸರ ಸಾಧನೆ, ಇದು ಯುಡಿಆರ್ ಎಂದು ಪ್ರಕರಣ ಮುಚ್ಚಿಹೋಗುವ ಸಾಧ್ಯತೆ ಇತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೂರು ತಾಲ್ಲೂಕು ತಾಳೂರು ಗ್ರಾಮದ ಚಾಲಕ ಗಂಗಪ್ಪ (35), ನಗರದ ಹೊಸ ಅಮರಾವತಿಯಲ್ಲಿ ಮನೆ ಕೆಲಸ ಮಾಡುವ ತ್ರಿವೇಣಿ ಯಾನೆ ಹುಲಿಗೆಮ್ಮ (35) ಮತ್ತು ತಾಲ್ಲೂಕಿನ ಕಾಕುಬಾಳು ಗ್ರಾಮದ ಟಿಪ್ಪರ್ ಚಾಲಕ ಎಚ್.ಮಂಜುನಾಥ್ ಅವರನ್ನು ಬಂಧಿಸಲಾಗಿದೆ ಎಂದು ಎಸ್.ಜಾಹ್ನವಿ ಮಾತಿಹಿ ನೀಡಿದರು.

ಅಗತ್ಯ ಸಿಬ್ಬಂದಿ ನಿಯೋಜನೆ: ನಗರದ ನ್ಯಾಯಾಲಯ ಆವರಣ ಸಮೀಪದ ಸಿದ್ಧಿಪ್ರಿಯ ಬೇಕರಿ ಮುಂಭಾಗ ಹಾಗೂ ಸೋಗಿ ಮಾರ್ಕೆಟ್ ಜಂಕ್ಷನ್‌ಗಳಲ್ಲಿ ಆಗಾಗ ಅಪಘಾತಗಳು, ಸಂಚಾರ ದಟ್ಟಣೆ ಸಂಭವಿಸುತ್ತಿದ್ದು, ತಕ್ಷಣ ಅಲ್ಲಿಗೆ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಎಸ್‌ಪಿ ಹೇಳಿದರು.

ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣದ ತನಿಖಾ ವರದಿ ಕೈಸೇರಿದೆ ಸಿಬ್ಬಂದಿ ತಪ್ಪು ಎಸಗಿದ್ದು ಗೊತ್ತಾಗಿದೆ ಇಲಾಖಾ ವಿಚಾರಣೆ ಆರಂಭವಾಗಿದ್ದು ಶಿಸ್ತು ಕ್ರಮ ಕೈಗೊಳ್ಳಲಾಗುವುದು
ಎಸ್‌.ಜಾಹ್ನವಿ ಎಸ್‌ಪಿ

‘ಪೊಲೀಸ್ ವೈಫಲ್ಯ ಅಲ್ಲ’

ಹೂವಿನಹಡಗಲಿ ತಾಲ್ಲೂಕಿನ ಹೊಳಲಿನಲ್ಲಿ ವರ್ತಕ ಮಂಜುನಾಥ ಶೇಜವಾಡಕರ್‌ ಅವರ ಅಪಹರಣ ಪ್ರಕರಣದಲ್ಲಿ ಪೊಲೀಸರು ವೈಫಲ್ಯ ಅನುಭವಿಸಿದರು ಎಂದು ಹೇಳಲಾಗದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವರ್ತಕನ ಜೀವ ಉಳಿಸಲು ನಾವು ನಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೆವು. ಆರೋಪಿಗಳ ಇರುವಿಕೆ ಪತ್ತೆಹಚ್ಚಲು ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ’ ಎಂದು ಎಸ್‌ಪಿ ಹೇಳಿದರು. ‘ಆರೋಪಿಗಳು ಯಾವ ರೀತಿಯ ಯೋಜನೆ ರೂಪಿಸಿದ್ದರು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ ಏಕೆಂದರೆ ಇಂತಹ ಮಾಹಿತಿ ಇನ್ನಷ್ಟು ಅಪರಾಧ ಕೃತ್ಯಗಳಿಗೆ ದಾರಿಮಾಡಿಕೊಡುವ ಅಪಾಯ ಇದೆ’ ಎಂದರು. ವರ್ತಕನ ಸಾವಿಗೆ ನಿಖರ ಕಾರಣ ಏನು ಎಂಬುದು ಕೂಲಂಕಷ ಪರೀಕ್ಷೆಗಳಿಂದ ತಿಳಿಯಲಿದೆ ಆ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.