ಹೊಸಪೇಟೆ (ವಿಜಯನಗರ): ರಾಜ್ಯಮಟ್ಟದ ಅಂಧರ ಚೆಸ್ ಟೂರ್ನಿ ಹಮ್ಮಿಕೊಂಡ ಅನುಭವ ಇರುವ ನಗರದ ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಡಿ.ಎನ್.ಸಂತೋಷ್ ಕುಮಾರ್ ಚದುರಂಗದ ಕೋಣೆಗಳಲ್ಲಿ ಮುಳುಗಿದ್ದರು. ಅವರಂತೆ 120ಕ್ಕೂ ಅಧಿಕ ಮಂದಿ ತಮ್ಮ ಟೇಬಲ್‌ಗಳಲ್ಲಿ ಇದ್ದರು. ಕೈಗಳು ಮೆದುಳಿಗೆ ಸಂದೇಶ ರವಾನಿಸುವ ಚಮತ್ಕಾರ ನಡೆಯುತ್ತಿತ್ತು.
ಮಾತಿಲ್ಲ, ಗಡಿಯಾರದ ಟಿಕ್ ಟಿಕ್ ಶಬ್ದವೂ ಇಲ್ಲ. ಎದುರಾಳಿ ಕಾಯಿ ಇಟ್ಟಿದ್ದು ಎಲ್ಲಿ ಎಂಬುದನ್ನು ತಿಳಿಯುವುದು ಎರಡೂ ಕೈಗಳ ಸಹಾಯದಿಂದಲೇ. ಆಗಲೇ ಮಿದುಳು ಮುಂದಿನ ನಡೆಯನ್ನು ಗ್ರಹಿಸಿ ಅದನ್ನು ಕೈಗಳಿಗೆ ಸಂದೇಶ ನೀಡುತ್ತದೆ. ಚಕಚಕನೆ ಕಾಯಿಗಳು ಮುನ್ನಡೆಯತ್ತವೆ, ಚೆಕ್‌ಮೇಟ್ ಮಾಡಿಯೂ ಬಿಡುತ್ತದೆ.
ಇದೆಲ್ಲ ನಡೆದುದು ಶುಕ್ರವಾರ ಇಲ್ಲಿನ ರೋಟರಿ ಸಭಾಂಗಣದಲ್ಲಿ. ಸೇವಿಯರ್ ಅಂಗವಿಕಲರ ಸೇವಾ ಸಮಿತಿಯು ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ರಾಜ್ಯಮಟ್ಟದ ಅಂಧರ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡವರು ಮೇಲ್ತೋರಿಕೆಗೆ ದೃಷ್ಟಿಹೀನರಾಗಿದ್ದರೂ, ಅವರ ಅಂತರ್‌ದೃಷ್ಟಿ ಪ್ರಖರವಾಗಿತ್ತು. ಆಟದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟರು.
ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನದ ಊಟದ ವಿರಾಮಕ್ಕೆ ಮೊದಲು ಮೊದಲ ಸುತ್ತು ಕೊನೆಗೊಂಡಿತ್ತು. ಮಧ್ಯಾಹ್ನದ ನಂತರ ಕೇವಲ ಎರಡು ಸುತ್ತುಗಳನ್ನಷ್ಟೇ ಆಡಿಸುವುದು ಸಾಧ್ಯವಾಯಿತು. ಹೀಗಾಗಿ ಇಡೀ ದಿನ ಮೂರು ಸುತ್ತಿನ ಪಂದ್ಯಗಳು ನಡೆದವು. ಒಟ್ಟು ಒಂಬತ್ತು ಸುತ್ತುಗಳಲ್ಲಿ ಪಂದ್ಯಗಳು ನಡೆಯಲಿದ್ದು, ಬಿಳಿಕಾಯಿ ವಿಭಾಗದಲ್ಲಿ 10, ಕಪ್ಪು ಕಾಯಿ ವಿಭಾಗದಲ್ಲಿ 10 ಮಂದಿ ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆಯುತ್ತ ಸಾಗಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ್, ಎಂಎಸ್‌ಪಿಎಲ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಾಗರಾಜ್, ವಿಜಯನಗರ ಕಾಲೇಜ್‌ನ ಎನ್‌ಸಿಸಿ ವಿಭಾಗದ ಮುಖ್ಯಸ್ಥ ಶರಣಬಸವೇಶ್ವರ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕೊಳಗದ್, ಕಾರ್ಯದರ್ಶಿ ಎಂ.ಆರ್.ವೀರಭದ್ರ ಇತರರು ಇದ್ದರು.
ಜ್ಞಾನದ ಕಣ್ಣು ತೆರೆದ ಪರಿ
ಅಂಧರ ಬಾಳು ಸದಾ ಅಂಧಕಾರದಲ್ಲೇ ಇರಬೇಕಿಲ್ಲ ಒಂದಿಷ್ಟು ಪ್ರೋತ್ಸಾಹ ನೀಡಿದರೆ ಅವರೂ ಇತರರಂತೆಯೇ ಜೀವನ ಸಾಗಿಸುವುದು ಕಷ್ಟವಲ್ಲ ಎಂಬುದಕ್ಕೆ ರೋಟರಿ ಸಭಾಂಗಣ ಸಾಕ್ಷಿ ನುಡಿಯಿತು. ಸ್ನಾತಕೋತ್ತರ ಶಿಕ್ಷಣ ಪಡೆದು ಇದೀಗ ಪಿಎಚ್.ಡಿ.ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಿಂಧನೂರಿನ ವ್ಯಕ್ತಿಯೊಬ್ಬರು ಸ್ಪರ್ಧಿಗಳ ಜತೆಗಿದ್ದರು. ಕೈಹಿಡಿದು ಸಭಾಂಗಣದೊಳಗೆ ತಂದು ಬಿಟ್ಟ ನಂತರ ಚದುರಂಗದ ಬೋರ್ಡ್ ಮುಂದೆ ಎಲ್ಲ ಅಂಧ ಸಾಧಕರೂ ಸ್ವತಂತ್ರರಾಗಿದ್ದರು. ಅವರ ಮೆದುಳು ಎಷ್ಟು ಚುರುಕು ಎಂಬುದು ಪ್ರತಿ ನಡೆಯಲ್ಲೂ ಕಾಣಿಸುತ್ತಿತ್ತು. ಭಾಗಶಃ ದೃಷ್ಟಿ ಹೊಂದಿದವರು ಸಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.