ADVERTISEMENT

ಹೊಸಪೇಟೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ | ಚರ್ಚ್‌ಗಳಿಗೆ ದೀಪಾಲಂಕಾರ–ಮನಸೆಳೆದ ಗೋದಲಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:08 IST
Last Updated 25 ಡಿಸೆಂಬರ್ 2025, 3:08 IST
<div class="paragraphs"><p>ಹೊಸಪೇಟೆಯ ಸೇಕ್ರೆಡ್ ಹಾರ್ಟ್‌ ಕೆಥೋಲಿಕ್‌ ಚರ್ಚ್ ಕ್ರಿಸ್‌ಮಸ್‌ಗೆ ವಿದ್ಯುತ್ ದೀಪಾಲಂಕಾರದೊಂದಿಗೆ ಸಜ್ಜುಗೊಂಡ ಬಗೆ&nbsp;</p></div>

ಹೊಸಪೇಟೆಯ ಸೇಕ್ರೆಡ್ ಹಾರ್ಟ್‌ ಕೆಥೋಲಿಕ್‌ ಚರ್ಚ್ ಕ್ರಿಸ್‌ಮಸ್‌ಗೆ ವಿದ್ಯುತ್ ದೀಪಾಲಂಕಾರದೊಂದಿಗೆ ಸಜ್ಜುಗೊಂಡ ಬಗೆ 

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ಕ್ರಿಸ್‌ಮಸ್ ಪ್ರಯುಕ್ತ ಬುಧವಾರ ಮಧ್ಯರಾತ್ರಿ ನಗರದ ಸೇಕ್ರೆಡ್ ಹಾರ್ಟ್‌ ಕೆಥೋಲಿಕ್ ಚರ್ಚ್‌ನಲ್ಲಿ ಧರ್ಮಗುರು ಫಾದರ್ ಭಗವಂತ್‌ ರಾಜ್‌ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಜಗತ್ತಿಗೆ ಕ್ರಿಸ್ತನ ಆಗಮನದ ಶುಭ ಸಂದೇಶವನ್ನು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಂಚಿಕೊಂಡರು.

ADVERTISEMENT

ಕ್ರಿಸ್‌ಮಸ್‌ಗೆ ಮೊದಲಾಗಿ ಒಂದು ತಿಂಗಳಿಂದಲೇ ತಯಾರಿಗಳು ನಡೆಯುತ್ತಲೇ ಬಂದಿದ್ದವು. ಪ್ರತಿ ವಾರ ಒಂದೊಂದು ಬಣ್ಣದ ಕ್ಯಾಂಡಲ್ ಹಚ್ಚಿ ಶಾಂತಿ, ಪ್ರೀತಿ, ಸ್ನೇಹದ ಸಂಕೇತವಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಬುಧವಾರ ರಾತ್ರಿ ಪ್ರೀತಿಯ ಸಂಕೇತವಾಗಿ ಬಿಳಿ ಬಣ್ಣದ ಕ್ಯಾಂಡಲ್ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿಶೇಷ ಪ್ರಾರ್ಥನೆಯಲ್ಲಿ ಡಾನ್‌ಬಾಸ್ಕೋದ ಫಾ.ರೋಷನ್‌, ಫಾ.ಸಜ್ಜಿ ಸಹ ಪಾಲ್ಗೊಂಡಿದ್ದರು. ಸಿಎಫ್‌ಎಲ್‌ ಸ್ಕೂಲ್‌ನ ಸಿಸ್ಟರ್‌ ಎಲಿಜಬೆತ್‌ ಅವರು ಸಹಕಾರ ನೀಡಿದರು.

ನಗರದಲ್ಲಿ ನಾಲ್ಕು ಕಡೆ ಪ್ರಮುಖ ಕೆಥೋಲಿಕ್‌ ಚರ್ಚ್‌ಗಳಿದ್ದು, ಅಲ್ಲಿ ಮಧ್ಯರಾತ್ರಿ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಸಿಹಿ ರೂಪದಲ್ಲಿ ಕೇಕ್‌ ವಿತರಿಸಲಾಯಿತು. ದೊಡ್ಡ ಮಸೀದಿ ಸಮೀಪದ ಸಿಎಸ್‌ಐ ಚರ್ಚ್‌, ಕಾಲೇಜು ರಸ್ತೆಯ ಅವಾಂಚಿಕಲ್‌ ಚರ್ಚ್‌ ಸಹಿತ ಪ್ರೊಟೆಸ್ಟೆಂಟ್‌ಗೆ ಒಳಪಟ್ಟ ಚರ್ಚ್‌ಗಳಲ್ಲಿ ಗುರುವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ. ನಗರ ಮತ್ತು ಸುತ್ತಮುತ್ತ ಹೀಗೆ 25ಕ್ಕಿಂತ ಅಧಿಕ ಪ್ರಮುಖ ಚರ್ಚ್‌ಗಳು ಮತ್ತು ಖಾಸಗಿ ಚರ್ಚ್‌ಗಳು ಇವೆ.

ನಗರದಲ್ಲಿ 10 ಸಾವಿರದಷ್ಟು ಕ್ರೈಸ್ತ ಸಮುದಾಯದವರಿದ್ದು, ಪರವೂರುಗಳಲ್ಲಿ ಇರುವವರು ಸಹ ಹಬ್ಬಕ್ಕೆಂದು ಊರಿಗೆ ಬಂದಿದ್ದಾರೆ. ಹೀಗಾಗಿ ಮನೆಗಳಲ್ಲಿ ಸಂಭ್ರಮ ತುಂಬಿ ತುಳುಕುತ್ತಿದೆ. 

ಹೊಸಪೇಟೆಯ ಸೇಕ್ರೆಡ್ ಹಾರ್ಟ್‌ ಕೆಥೋಲಿಕ್‌ ಚರ್ಚ್ ಬಳಿ ನಿರ್ಮಾಣಗೊಂಡ ಆಕರ್ಷಕ ಗೋದಲಿ  –ಪ್ರಜಾವಾಣಿ ಚಿತ್ರ/ ಲವ ಕೆ.
ಆಕರ್ಷಕ ಗೋದಲಿಗಳು
ಜಗತ್ತಿಗೆ ಬೆಳಕಾಗಿ ಬಂದ ಕ್ರಿಸ್ತನ ಜನನವಾದುದು ಗೋದಲಿಯಲ್ಲಿ ಎಂಬ ಪ್ರತೀತಿಯ ಮೇರೆಗೆ ಚರ್ಚ್‌ಗಳ ಬಳಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿದ್ದು ಅವುಗಳೇ ಪ್ರಮುಖ ಆಕರ್ಷಣೆಗಳೂ ಆಗಿವೆ. ಇದರ ಜತೆಗೆ ಹಬ್ಬದೂಟಕ್ಕೆ ಮನೆಗಳಲ್ಲಿ ಸಿದ್ಧತೆ ಸಾಗಿದ್ದು ಸಂಭ್ರಮ ಮನೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.