ADVERTISEMENT

ಮೋದಿಗೆ ಮತ್ತೆ ಪ್ರಧಾನಿ ಆಗಲ್ಲ ಎಂಬ ಚಿಂತೆ: ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 0:52 IST
Last Updated 30 ಏಪ್ರಿಲ್ 2024, 0:52 IST
ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇ.ತುಕಾರಾಂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು  –ಪ್ರಜಾವಾಣಿ ಚಿತ್ರ
ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇ.ತುಕಾರಾಂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು  –ಪ್ರಜಾವಾಣಿ ಚಿತ್ರ   

ಕೂಡ್ಲಿಗಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ, ಅದಕ್ಕಾಗಿಯೇ ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಅಳಿಸಿ ಹಾಕಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಪರವಾಗಿ ಸಂಘಟಿಸಿದ್ದ ‘ಪ್ರಜಾಧ್ವನಿ-2 ಜನ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ಸೋಲಿನ ಭಯದಿಂದ ಮೋದಿ ಅವರು ಹೆಚ್ಚೆಚ್ಚು ಸುಳ್ಳು ಸೃಷ್ಟಿಸಿ ಭಾರತೀಯರ ನಡುವೆ ಬಿರುಕು ಮೂಡಿಸುತ್ತಿದ್ದಾರೆ, ಇದರ ಬಗ್ಗೆ ಜನ ಎಚ್ಚರದಿಂದಿರಬೇಕು’ ಎಂದು ಹೇಳಿದರು.

‘ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಮೋದಿ ಸಂಚು ವಿಫಲಗೊಳಿಸಿ’ ಎಂದು ಕೇಳಿಕೊಂಡ ಸಿದ್ದರಾಮಯ್ಯ, ‘ಬಳ್ಳಾರಿ ಕ್ಷೇತ್ರಕ್ಕೆ ಸಚಿವರಾಗಿ ಚೊಂಬು ಕೊಟ್ಟ ಶ್ರೀರಾಮುಲು ಸೋಲಲೇಬೇಕು’ ಎಂದರು.

ADVERTISEMENT

ಮೋಹನ್ ಭಾಗವತ್ ಹೇಳಿಕೆ ಸುಳ್ಳು:

‘ತಾವು ಮೀಸಲಾತಿಗೆ ವಿರುದ್ಧವಿಲ್ಲ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿರುವುದು ಹಸಿ ಸುಳ್ಳು. ಮೀಸಲಾತಿ ವಿರೋಧಿಸಿ ರಾಜ್ಯಸಭಾ ಸದಸ್ಯ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಾಮಾ ಜೋಯಿಸ್ ಕೋರ್ಟ್ ಮೆಟ್ಟಿಲೇರಿದ್ದು ದೇಶದ ಹಿಂದುಳಿದ ಸಮುದಾಯಗಳು ಮರೆತಿಲ್ಲ. ಮಂಡಲ್ ವರದಿಗೆ ವಿರೋಧ ಮಾಡಿ ಹಿಂದುಳಿದ ಜಾತಿ-ಸಮುದಾಯಗಳ ಮಕ್ಕಳನ್ನು ಆತ್ಮಹತ್ಯೆಗೆ ತಳ್ಳಿದ್ದು ಇದೇ ಬಿಜೆಪಿ. ಸಂಘ ಪರಿವಾರ ಹುಟ್ಟಿನಿಂದಲೇ ಮೀಸಲಾತಿ ವಿರೋಧಿಗಳು. ಆದರೆ ಸುಳ್ಳುಗಳ ಮೂಲಕ ಹಿಂದುಳಿದವರನ್ನು ಪದೇ ಪದೇ ವಂಚಿಸುವುದು ಇವರಿಗೆ ರೂಢಿಯಾಗಿದೆ. ಈ ಬಗ್ಗೆ ಜನತೆ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಶಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.