ADVERTISEMENT

ಜನಾರ್ದನ ರೆಡ್ಡಿ ಪಕ್ಷದಿಂದ ಬಿಜೆಪಿಗೆ ಲುಕ್ಸಾನ: ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 11:23 IST
Last Updated 12 ಜನವರಿ 2023, 11:23 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಹೊಸಪೇಟೆ (ವಿಜಯನಗರ): ‘ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಲುಕ್ಸಾನ ಆಗಲಿದೆ’ ಎಂದು ಮಾಜಿಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರಡ್ಡಿ ತಿಳಿಸಿದರು.

ಗುರುವಾರ ನಗರದಲ್ಲಿ ಪ್ರಜಾ ಧ್ವನಿ ಯಾತ್ರೆಯ ಪೂರ್ವಸಿದ್ಧತಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಅವರದು ಪ್ರಾದೇಶಿಕ ಪಕ್ಷವಲ್ಲ. ಅದರ ಚಟುವಟಿಕೆಗಳು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಿಗೆ ಸೀಮಿತವಾಗಿದೆ. ಆ ಪಕ್ಷದಿಂದ ಕಾಂಗ್ರೆಸ್ಸಿಗೆ ಏನು ಸಮಸ್ಯೆ ಆಗುವುದಿಲ್ಲ ಎಂದರು.

ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷದಲ್ಲಿದ್ದವರು. ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದವರು ರೆಡ್ಡಿ ಅವರ ಪಕ್ಷದಿಂದ ಸ್ಪರ್ಧಿಸುತ್ತಾರೆ. ಆಗ ನೂರಕ್ಕೆ ನೂರು ಬಿಜೆಪಿ ಪಕ್ಷಕ್ಕೆ ಲುಕ್ಸಾನ ಆಗುತ್ತದೆ. ಕಾಂಗ್ರೆಸ್‌ ಅವರ ಪಕ್ಷದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.

ADVERTISEMENT

ಸಿ.ಎಂ.ಗೆ ನಾಯಿ ಮರಿ ಎಂದಿದ್ದು ಸಾಂದರ್ಭಿಕ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಅಸಹ್ಯವಾಗಿ ಮಾತನಾಡುವ ಉದ್ದೇಶದಿಂದ ನಾಯಿ ಮರಿ ಪದ ಬಳಸಿಲ್ಲ. ಸಾಂದರ್ಭಿಕವಾಗಿ ಹೇಳಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಿ.ಎಂ. ಅವರು ಪ್ರಧಾನಿ ಎದುರು ನಾಯಿ ಮರಿ ತರಹ ಬಾಲ ಅಲ್ಲಾಡಿಸುತ್ತಾರೆ. ಏನು ಕೇಳುವುದಿಲ್ಲ ಎಂದಿದ್ದಾರೆ.

ರಾಜ್ಯದಲ್ಲೇ ಸಜ್ಜನಿಕೆಗೆ ಹೆಸರಾದ ರಾಜಕಾರಣಿ ಯಾರಾದರೂ ಇದ್ದರೆ ಅವರು ಸಿದ್ದರಾಮಯ್ಯ. ಅವರ ಜನಪ್ರಿಯತೆ ಸಹಿಸದೆ ಬಿಜೆಪಿಯವರು ಅವರ ಕುರಿತಾಗಿ ಪುಸ್ತಕ ಬಿಡುಗಡೆಗೆ ಮುಂದಾಗಿದ್ದರು. ಅದಕ್ಕೆ ಕೋರ್ಟ್‌ ತಡೆ ನೀಡಿದೆ ಎಂದರು.
ವಿಧಾನಸಭೆ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೇನೆ.

ಈಗಾಗಲೇ ಬೆಂಗಳೂರಿನಲ್ಲಿ ಸಭೆ ಕೂಡ ನಡೆದಿದೆ. ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗುವುದು. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ. ಸಾಮಾಜಿಕ ನ್ಯಾಯ ಒಳಗೊಂಡಂತೆ ಗೆಲ್ಲುವವರಿಗೆ ಈ ಸಲ ಟಿಕೆಟ್‌ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.