ADVERTISEMENT

ನರೇಗಾ ರದ್ದುಪಡಿಸುವ ಹುನ್ನಾರ: ಜ.26ರಿಂದ ಪಾದಯಾತ್ರೆಗೆ ಕಾಂಗ್ರೆಸ್ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:41 IST
Last Updated 14 ಜನವರಿ 2026, 15:41 IST
   

ಹೊಸಪೇಟೆ (ವಿಜಯನಗರ): ನರೇಗಾದ ಹೆಸರು, ಸ್ವರೂಪ ಬದಲಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ಮುಂದಿನ ಐದು ವರ್ಷಗಳಲ್ಲಿ ಇಡೀ ಯೋಜನೆಯನ್ನೇ ರದ್ದುಪಡಿಸುವ ಹುನ್ನಾರ ಇದೆ, ಇದನ್ನು ಕಾಂಗ್ರೆಸ್ ಉಗ್ರವಾಗಿ ವಿರೋಧಿಸಲಿದೆ, ಪಂಜಾಬ್ ರೈತರ ಹೋರಾಟದ ರೀತಿಯಲ್ಲಿ ವಾಪಸ್ ಪಡೆಯುವ ತನಕವೂ ಈ ಹೋರಾಟ ನಡೆಯಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಇಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌, ಸಂಸದ ಇ.ತುಕಾರಾಂ ಮತ್ತು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಈ ಎಚ್ಚರಿಕೆ ನೀಡಿದರು.

‘ಹೊಸ ಯೋಜನೆ ತಂದು ಯಾರ ಹೆಸರನ್ನಾದರೂ ಇಡಲಿ, ಜನರಿಗೆ ಉಪಯೋಗ ಆಗಲಿ, ಆದರೆ ಕೇಂದ್ರ ಇದೀಗ ಮಾಡಿರುವುದು ಹಳೆಯ ಯೋಜನೆಯ ಹೆಸರು ಬದಲಾವಣೆ ಮತ್ತು ರಾಜ್ಯಗಳಿಗೆ ಹೊರೆ ಹಾಕಿರುವುದು ಮಾತ್ರ, ಮೇಲಾಗಿ ಕೂಲಿಕಾರ್ಮಿಕರ ಹೊಟ್ಟೆಗೆ ಹೊಡೆಯಲು ಹೊರಟಿದೆ. 125 ದಿನ ಕೆಲಸ ಎಂಬುದು ತೋರಿಕೆಗೆ ಮಾತ್ರ, ವಾಸ್ತವವಾಗಿ 60 ದಿನ ಕೆಲಸವೂ ಸಿಗುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸ್ವರೂಪ ಬದಲಾವಣೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ, ಎಲ್ಲಿ ಭ್ರಷ್ಟಾಚಾರ ಆಗಿದೆ ಎಂಬುದನ್ನು ತೋರಿಸಲಿ’ ಎಂದು ಸಚಿವ ಜಮೀರ್ ಸವಾಲು ಹಾಕಿದರು.

ADVERTISEMENT

ಜಿಲ್ಲೆಯಲ್ಲಿ 2.34 ಲಕ್ಷ ಜಾಬ್‌ಕಾರ್ಡ್ ಇದ್ದು, ಸಕ್ರಿಯವಾಗಿ ಇರುವುದು 1.60 ಲಕ್ಷ ಮಾತ್ರ. ಹೀಗಿರುವಾಗ ಭ್ರಷ್ಟಾಚಾರ ಆಗುತ್ತಿದೆ, ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ವ್ಯವಸ್ಥೆಯ ಲೋಪದೋಷ ಸರಿಪಡಿಸಲಿ, ಆದರ ಬದಲಿಗೆ ಒಂದು ಉತ್ತಮ ಯೋಜನೆಯನ್ನೇ ರದ್ದುಪಡಿಸಲು ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಸಂಸದ ತುಕಾರಾಂ ಮಾತನಾಡಿ, ಕೇಂದ್ರ ₹150 ಲಕ್ಷ ಕೋಟಿ ಸಾಲ ಮಾಡಿದೆ, ಜನರ ಗಮನ ಬೇರೆಡೆಗೆ ಸೆಳೆಯಲು ನರೇಗಾಕ್ಕೆ ಕೈಹಾಕಿದೆ, ಇದು ಆರ್‌ಎಸ್‌ಎಸ್ ಕಾರ್ಯಸೂಚಿಯ ಭಾಗ. ದೇಶದ ಸಂಪತ್ತು ಕೇವಲ 10 ಮಂದಿಯ ಕೈಯಲ್ಲೇ ಇರಬೇಕು ಎಂಬುದು ಕೇಂದ್ರದ ಹುನ್ನಾರ, ಬಡವರ ಹಕ್ಕಿನ ಕಡಿತಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ, ಪಂಜಾಬ್ ರೈತ ಹೋರಾಟದಂತೆಯೇ ನಿರ್ಧಾರ ವಾಪಸ್‌ ಪಡೆಯುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು.

ಸಿರಾಜ್ ಶೇಖ್ ಮಾತನಾಡಿ, ಜ.26ರಿಂದ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕಿ.ಮೀ.ಪಾದಯಾತ್ರೆ ನಡೆಸಿ ಕೇಂದ್ರ ಸರ್ಕಾರದ ಹುನ್ನಾರವನ್ನು ಜನರಿಗೆ ಮನವರಿಕೆ ಮಾಡಲಾಗುವುದು ಎಂದರು.

ರಾಮನ ಹೆಸರನ್ನು ಮುಂದಿಟ್ಟು, ಕಾಂಗ್ರೆಸ್ ರಾಮನ ವಿರೋಧಿ ಎಂದು ಬಿಂಬಿಸಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಹುನ್ನಾರವನ್ನು ಕೇಂದ್ರ ನಡೆಸಿದೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಭರತ್‌ ರೆಡ್ಡಿ, ಜೆ.ಎನ್‌.ಗಣೇಶ್, ಲಗಾ ಮಲ್ಲಿಕಾರ್ಜುನ, ಹುಡಾ ಅಧ್ಯಕ್ಷ ಎಚ್‌.ಎನ್.ಎಫ್‌.ಮೊಹಮ್ಮದ್ ಇಮಾಂ ನಿಯಾಜಿ, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್ ಇದ್ದರು.

ಇದಕ್ಕೆ ಮೊದಲು ನಗರದ ಪ್ರವಾಸಿ ಮಂದಿರದ ಬಳಿ ಸಚಿವ ಜಮೀರ್ ನೇತೃತ್ವದಲ್ಲಿ ನರೇಗಾ ಮಾರ್ಪಾಡು ವಿರೋಧಿಸಿ ಪ್ರತಿಭಟನೆ ನಡೆಯಿತು.

ಶಾಂತಿ ಕಾಪಾಡಲು ಹೇಳಿದ್ದೆ

ಬಳ್ಳಾರಿ ಗಲಭೆಯಲ್ಲಿ ಭರತ್ ರೆಡ್ಡಿ ಅವರು ಕರೆ ಕೊಟ್ಟ ಕಾರಣಕ್ಕೇ ನಗರದಲ್ಲಿ ಶಾಂತಿ ನೆಲೆಸಿತು ಎಂದು ಸಚಿವ ಜಮೀರ್ ಹೇಳಿದಾಗ ಭರತ್ ರೆಡ್ಡಿ ಅವರು ಆಡಿದ ಮಾತಿನ ಬಗ್ಗೆ ಪ್ರಸ್ತಾಪವಾಯಿತು. ಆ ಮಾತಿಗಾಗಿ ಶಾಸಕರನ್ನು ಏಕೆ ಬಂಧಿಸಿಲ್ಲ ಎಂದು ಪತ್ರಕರ್ತರು ಕೇಳಿದರು. ಸ್ಥಳದಲ್ಲೇ ಇದ್ದ ಭರತ್‌ ರೆಡ್ಡಿ ಅವರು ತಾವು ಅಂದು ನೀಡಿದ ಹೇಳಿಕೆಯ ವಿಡಿಯೊ ತುಣುಕನ್ನು ಮಾಧ್ಯಮದವರಿಗೆ ತೋರಿಸಿದರು.

‘ನನ್ನ ವಯಸ್ಸು 34, ಎದುರಿಗಿದ್ದವರ ವಯಸ್ಸು 65. ಈ ಸಂದರ್ಭದಲ್ಲಿ ಅವರು ಹೇಗೆ ನಡೆದುಕೊಳ್ಳಬೇಕಿತ್ತೋ ಹಾಗೆ ನಡೆದುಕೊಂಡಿಲ್ಲ. ನಾನು ಕೂಡ ಅವರಂತೆಯೇ ರೊಚ್ಚಿಗೆದ್ದು ವರ್ತಿಸಿದ್ದರೆ ಇಡೀ ಬಳ್ಳಾರಿ ಹೊತ್ತಿ ಉರಿಯುತ್ತಿತ್ತು ಎಂದು ನಾನು ಹೇಳಿದ್ದೆ. ಶಾಂತಿ ಕಾಪಾಡಲು ತಿಳಿಸಿದ್ದರಿಂದಲೇ ನಗರದಲ್ಲಿ ಶಾಂತಿ ಸ್ಥಾಪನೆಯಾಯಿತು’ ಎಂದು ಭರತ್ ರೆಡ್ಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.