ADVERTISEMENT

ಸಂವಿಧಾನ ಪೂಜೆಗಿಂತ ಅನುಷ್ಠಾನ ಮುಖ್ಯ: ಪ್ರೊ. ವೆಂಕಟಗಿರಿ ದಳವಾಯಿ

ವಿವಿಧ ಕಡೆ ಸಂವಿಧಾನ ಸಮರ್ಪಣಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:13 IST
Last Updated 26 ನವೆಂಬರ್ 2021, 16:13 IST
ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ಶುಕ್ರವಾರ ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಂಕಟಗಿರಿ ದಳವಾಯಿ ಮಾತನಾಡಿದರು
ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ಶುಕ್ರವಾರ ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಂಕಟಗಿರಿ ದಳವಾಯಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಶುಕ್ರವಾರ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ, ಸಂವಿಧಾನಕ್ಕೆ ಪುಷ್ಪಾರ್ಚನೆ ಮಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಭಾರತದ ಸಂವಿಧಾನದಿಂದ ನಾವೆಲ್ಲರೂ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಸೌಂದರ್ಯ ಕಾಣಬಹುದು. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತ ಸಂವಿಧಾನವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ಇದು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಸಹಾಯಕವಾಗುತ್ತದೆ’ ಎಂದರು.
ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಪ್ರಾಧ್ಯಾಪಕರಾದ ಎ.ಶ್ರೀಧರ್, ಎ.ವೆಂಕಟೇಶ್, ಸಂಶೋಧನಾ ವಿದ್ಯಾರ್ಥಿ ನಿಖಿಲಾದೇವಿ ಇದ್ದರು.

ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಅಭಿವೃದ್ಧಿ ಸಂಸ್ಥೆ:

‘ಭಾರತದ ಪ್ರಜೆಗಳು ಸಂವಿಧಾನ ಪೂಜೆ ಮಾಡುವ ಬದಲಾಗಿ ಅದನ್ನು ಅನುಷ್ಠಾನಗೊಳಿಸಲು ಕೈಜೋಡಿಸಿದರೆ ಭಾರತದ ಭವಿಷ್ಯ ಉತ್ತುಂಗದಲ್ಲಿರುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಂಕಟಗಿರಿ ದಳವಾಯಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಸಮಾನತೆ, ಸಹೋದರತ್ವ ಹಾಗೂ ಭಾತೃತ್ವ ತತ್ವಗಳನ್ನು ಗೌತಮ್‌ ಬುದ್ಧರಿಂದ ತಿಳಿದುಕೊಂಡು ವೈಚಾರಿಕ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ದೇಶದ ಎಲ್ಲಾ ಪ್ರಜೆಗಳಿಗೆ ರಕ್ತಪಾತವಿಲ್ಲದೆ ಮತದಾನದ ಹಕ್ಕು ಸಂವಿಧಾನದ ಮೂಲಕ ಸಿಕ್ಕಿತು’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ವೆಂಕಟೇಶ್ ಮಾತನಾಡಿ, ‘ಸಂವಿಧಾನ ಎಲ್ಲರಿಗೂ ಗೌರವ, ಸ್ವಾಭಿಮಾನದ ಬದುಕು ನೀಡಿದೆ’ ಎಂದರು.ಸಂಘಟನೆ ರಾಜ್ಯ ಸಂಚಾಲಕ ಗ್ಯಾನಪ್ಪ ಬಡಿಗೇರ, ಸದಸ್ಯ ಎ.ಚಿದಾನಂದ, ಅಂಬೇಡ್ಕರ್ ಸಂಘದ ಅಧ್ಯಕ್ಷಎಂ.ಸಿ.ವೀರಸ್ವಾಮಿ, ಸದಸ್ಯರಾದ ಬಿ.ಬಸವರಾಜ, ಖಾಜಾ ಹುಸೇನ್‌ ನಿಯಾಜಿ, ಜಿಲ್ಲಾ ಸಂಚಾಲಕಿ ವಿ.ಯಮುನಮ್ಮ ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ವೆಂಕಟೇಶ್ ಮಾತನಾಡಿ, ‘ಭಾರತ ಸಂವಿಧಾನವು ಪ್ರಪಂಚದಲ್ಲಿಯೇ ವಿಶಿಷ್ಟವಾಗಿದ್ದು, ದೇಶದ ಸಮಸ್ತ ನಾಗರಿಕರ ಹಿತವನ್ನು ಕಾಪಾಡುತ್ತದೆ’ ಎಂದರು.

‘ಡಾ. ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನವು ಜೀವಪರ ಆಶಯಗಳನ್ನು ಹೊಂದಿದೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀಡುವ ಗುರಿಯನ್ನು ಹೊಂದಿದೆ. ಬಹು ಸಂಸ್ಕೃತಿ ಇರುವ ಭಾರತವನ್ನು ರಕ್ಷಿಸುತ್ತಾ ಬಂದಿದೆ’ ಎಂದು ಹೇಳಿದರು. ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ:

ನಗರದ ಶಾಲಾ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮ ಪ್ರಸಾದ್, ಸದಸ್ಯ ಕಾರ್ಯದರ್ಶಿ ಕಿಶನ್ ಬಿ.ಮಾಡಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ, ಮುಖ್ಯಶಿಕ್ಷಕ ಎಚ್.ಎಲ್.ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.