ADVERTISEMENT

ವಿಜಯನಗರ: ವಾರದ ನಂತರ ಮತ್ತೆ ಕೋವಿಡ್‌ ಲಸಿಕಾಕರಣ; ಎಲ್ಲ ಕೇಂದ್ರದಲ್ಲೂ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 10:43 IST
Last Updated 2 ಆಗಸ್ಟ್ 2021, 10:43 IST
ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಕೋವಿಡ್‌ ಲಸಿಕೆ ಪಡೆಯಲು ಸಾಕಷ್ಟು ಜನ ಬಂದಿದ್ದರು
ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಕೋವಿಡ್‌ ಲಸಿಕೆ ಪಡೆಯಲು ಸಾಕಷ್ಟು ಜನ ಬಂದಿದ್ದರು   

ಹೊಸಪೇಟೆ (ವಿಜಯನಗರ): ಒಂದು ವಾರದ ಬಿಡುವಿನ ನಂತರ ಸೋಮವಾರ ಪುನಃ ನಗರದಲ್ಲಿ ಕೋವಿಡ್‌ ಲಸಿಕಾಕರಣ ಆರಂಭಗೊಂಡಿದ್ದು, ನಗರದ ಎಲ್ಲ ಕೇಂದ್ರಗಳಲ್ಲೂ ದಿನವಿಡೀ ಭಾರಿ ಜನದಟ್ಟಣೆ ಕಂಡು ಬಂತು.

ನಗರದ ರೋಟರಿ ಕ್ಲಬ್‌ ಆವರಣ, ಒಳಾಂಗಣ ಕ್ರೀಡಾಂಗಣ ಹಾಗೂ ವಿನೋಬಾ ಭಾವೆ ಶಾಲೆಯ ಕೇಂದ್ರದಲ್ಲಿ ಜನಜಾತ್ರೆ ನೆರೆದಿತ್ತು. ಎಲ್ಲರೂ ಮಾಸ್ಕ್‌ ಧರಿಸಿಕೊಂಡು ಬಂದಿದ್ದರು. ಆದರೆ, ಅಂತರ ಮರೆಯಾಗಿತ್ತು. ಇತರೆ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಕೇಂದ್ರದ ಹೊರಗೆ ವಾಹನ ಜಮಾವಣೆ ಹೆಚ್ಚಿತ್ತು.

ಒಂದು ವಾರದಿಂದ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಲಸಿಕೆ ಇರಲಿಲ್ಲ. ಸೋಮವಾರ ಲಸಿಕೆ ನೀಡುವ ವಿಷಯ ಮುಂಚಿತವಾಗಿಯೇ ತಿಳಿಸಿದ್ದರಿಂದ ಬೆಳಿಗ್ಗೆಯಿಂದಲೇ ಜನ ಲಸಿಕೆ ಕೇಂದ್ರಗಳತ್ತ ದೌಡಾಯಿಸಿದ್ದರು. ಉದ್ದನೆಯ ಸಾಲಿನಲ್ಲಿ ತಡಹೊತ್ತು ನಿಂತು ಲಸಿಕೆ ಹಾಕಿಸಿಕೊಂಡರು.

ADVERTISEMENT

‘ಸದ್ಯ ನಗರದಲ್ಲಿ 3,500 ಕೋವ್ಯಾಕ್ಸಿನ್, 6500 ಕೋವಿಶೀಲ್ಡ್ ಲಸಿಕೆ ಲಭ್ಯ ಇದೆ. ನಗರ ಸೇರಿದಂತೆ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ 18 ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಲಸಿಕೆಯನ್ನು ಹಾಕಲಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು, ಎರಡನೇ ಡೋಸ್‌ ಅನ್ನು 84 ರಿಂದ 120 ದಿನ, ಕೋವ್ಯಾಕ್ಸಿನ್ 28ರಿಂದ 60 ದಿನಗಳವರೆಗೆ ಎರಡನೇ ಡೋಸ್ ಪಡೆಯಬಹುದು. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಎರಡನೇ ಡೋಸ್ ಪಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.