ADVERTISEMENT

ಹಸು-ಕರು ಕಳ್ಳತನ ಪ್ರಕರಣ: ಆರೋಪಿ ಆಸ್ಪತ್ರೆಯಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 12:51 IST
Last Updated 19 ಏಪ್ರಿಲ್ 2024, 12:51 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕಂಭಟ್ರಹಳ್ಳಿ ಉಪಕಾರಾಗೃಹದ ಬಂಧನದಲ್ಲಿದ್ದಾಗ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಸು–ಕರು ಕಳವು ಆರೋಪಿ ಜಭಿವುಲ್ಲಾ (26) ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಜಭಿವುಲ್ಲಾಗೆ ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ. ಶುಕ್ರವಾರ ತೆಲಿಗಿ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಮೂಲಗಳು ತಿಳಿಸಿವೆ.

ಅನುಮಾನಸ್ಪದ ಸಾವು ದೂರು ದಾಖಲು : ಜಭಿವುಲ್ಲಾ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ತನಿಖೆ ಕೈಗೊಳ್ಳುವಂತೆ ಮೃತನ ಪೋಷಕರು ನೀಡಿರುವ ದೂರು ಆಧರಿಸಿ ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಹಿನ್ನೆಲೆ: ಆರೋಪಿ ಜಭಿವುಲ್ಲಾ ಅವರನ್ನು ಪೊಲೀಸರು ಇದೇ 14ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕಂಭಟ್ರಹಳ್ಳಿ ಉಪಕಾರಾಗೃಹದಲ್ಲಿ ಅವರನ್ನು ಇರಿಸಲಾಗಿತ್ತು. ಅದೇ ದಿನ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕರೆತರಲಾಗಿತ್ತು. 16ರಂದು ವಿಚಾರಣಾಧೀನ ಕೈದಿಗಳು ವಾಯುವಿಹಾರ ಮಾಡುತ್ತಿದ್ದಾಗ ಜಭಿವುಲ್ಲಾ ಕುಸಿದು ಬಿದ್ದರು. ಮೂರ್ಛೆ ಹೋಗಿದ್ದ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾಮೀನು ಸಿಕ್ಕಿದ್ದರಿಂದ ಆಸ್ಪತ್ರೆಯಲ್ಲೇ ಅವರನ್ನು ಪೋಷಕರಿಗೆ ಒಪ್ಪಿಸಲಾಗಿತ್ತು.

‘ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮಕ್ಕೆ ನಿರ್ಧರಿಸಲಾಗುವುದು’ ಎಂದು ಎಸ್ಪಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.

ತೆಲಿಗಿ ಗ್ರಾಮದಲ್ಲಿ ಹಸು ಮತ್ತು ಕರು ಕಳ್ಳತನವಾಗಿರುವ ಕುರಿತು ಇದೇ 12ರಂದು ಹಲವಾಗಲು ಠಾಣೆಯಲ್ಲಿ ದೂರು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.