ADVERTISEMENT

ಕ್ಯಾಸಿನೋ ಹೆಸರಲ್ಲಿ ವಂಚನೆ: ಇಬ್ಬರ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 14:35 IST
Last Updated 11 ಅಕ್ಟೋಬರ್ 2025, 14:35 IST

ಹೂವಿನಹಡಗಲಿ: ಟೂರ್ ಪ್ಯಾಕೇಜ್ ಹೆಸರಲ್ಲಿ ನೇಪಾಳಕ್ಕೆ ಕರೆದೊಯ್ದಿದ್ದ ಹಗರಿಬೊಮ್ಮನಹಳ್ಳಿಯ ಭರತ್, ಸಮೀರ್ ಎಂಬುವವರು ಕ್ಯಾಸಿನೋ ಜೂಜಾಟದಲ್ಲಿ ವಂಚಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯ ಎ.ಜೆ.ವೀರೇಶ್ ಶನಿವಾರ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ವಿದೇಶದಲ್ಲಿನ ನಾಲ್ಕು ದಿನಗಳ ಇವೆಂಟ್‌ಗೆ ಉಚಿತವಾಗಿ ಕರೆದೊಯ್ಯುತ್ತೇವೆ ಎಂದು ನಂಬಿಸಿ, ಭರತ್, ಸಮೀರ್ ಅವರು ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ ವಿಮಾನದಲ್ಲಿ ಕರೆದೊಯ್ದಿದ್ದರು. ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ  ಇಸ್ಪೀಟ್ ಜೂಜಾಟ ಏರ್ಪಡಿಸಿದ್ದರು. ನೀವು ಮದ್ಯದ ಅಮಲಿನಲ್ಲಿದ್ದಾಗ ₹37 ಲಕ್ಷ ಸಾಲ ನೀಡಿದ್ದು ಹಣ ವಾಪಸ್ ಕೊಡಬೇಕು, ಇಲ್ಲದಿದ್ದರೆ ಅಲ್ಲಿ ನೀವು ಮಹಿಳೆಯರೊಂದಿಗಿರುವ ವಿಡಿಯೊಗಳನ್ನು ಸಂಬಂಧಿಗಳಿಗೆ ಕಳಿಸುತ್ತೇವೆ ಎಂದು ಬೆದರಿಕೆಯೊಡ್ಡಿ ನನ್ನಿಂದ ₹30 ಲಕ್ಷ ಪಡೆದಿದ್ದು, ಇನ್ನೂ ₹7 ಲಕ್ಷ ನೀಡಲು ಒತ್ತಡ ಹೇರುತ್ತಿದ್ದಾರೆ’ ಎಂದು ವೀರೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ADVERTISEMENT