ADVERTISEMENT

ಬಿರುಬಿಸಿಲಿನಲ್ಲೂ ಹಂಪಿಯಲ್ಲಿ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:13 IST
Last Updated 4 ಫೆಬ್ರುವರಿ 2024, 15:13 IST
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ದಟ್ಟಣೆಯಲ್ಲಿ ಕಂಡುಬಂದ ದೃಶ್ಯ  –ಪ್ರಜಾವಾಣಿ ಚಿತ್ರ
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ದಟ್ಟಣೆಯಲ್ಲಿ ಕಂಡುಬಂದ ದೃಶ್ಯ  –ಪ್ರಜಾವಾಣಿ ಚಿತ್ರ   

ಹಂಪಿ (ವಿಜಯನಗರ): ಹಂಪಿ ಉತ್ಸವ-2024ರ ಕೊನೆಯ ದಿನ ಭಾನುವಾರ ರಜೆ ಇದ್ದ ಕಾರಣ ಉತ್ಸವ ನೆಪದಲ್ಲಿ ಆಗಮಿಸಿದ್ದ ಲಕ್ಷಾಂತರ ಜನರು ಬಿಸಿಲಿನ ಝಳ ಲೆಕ್ಕಿಸದೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟು ಕಣ್ತುಂಬಿಕೊಂಡರು.

ರೊಟ್ಟಿ ಬುತ್ತಿ ಕಟ್ಟಿಕೊಂಡು ಸಾರಿಗೆ ಬಸ್‌ಗಳಲ್ಲಿ ಕುಟುಂಬ ಸಮೇತರಾಗಿ ಬಂದಿಳಿದ ಜನರು ರಣ ಬಿಸಿಲಿಗೆ ಮೈಯೊಡ್ಡಿ ತಿರುಗಾಡಿದರು. ಚಿಕ್ಕ ಮಕ್ಕಳನ್ನು ಹೆಗಲಮೇಲೆ ಹೊತ್ತು ಸಾಗಿದರು.

ಸಾವಯವ ಸಿರಿಧಾನ್ಯ ವಸ್ತು ಪ್ರದರ್ಶನ, ಮತ್ಸ್ಯ ಮೇಳ, ಫಲಪುಷ್ಪ ಪ್ರದರ್ಶನ, ತಿಂಡಿ ತಿನಿಸು ಆಟಿಕೆ, ಪುಸ್ತಕ, ಬಟ್ಟೆ ಮಳಿಗೆಗಳಲ್ಲಿ ದಟ್ಟಣೆ ಹೆಚ್ಚಾಗಿತ್ತು. ಮಕ್ಕಳಿಗೆ ಆಟಿಕೆ ಸಾಮಗ್ರಿ, ಕಲಿಕೋಪಕರಣ ಖರೀದಿ ಜೋರಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ವ್ಯಾಪಾರಿಗಳು ಜನರ ಸ್ಪಂದನೆಗೆ ಖುಷಿಯಾಗಿದ್ದರು. ಬಣ್ಣದ ಬಣ್ಣದ ಮೀನುಗಳನ್ನು ಕಣ್ತುಂಬಿಕೊಂಡರು. ಅರಣ್ಯ ಇಲಾಖೆಯ ವನ್ಯಜೀವಿ ಜಾಗೃತಿ ಪ್ರದರ್ಶನ ಆಕರ್ಷಿಸಿತು.

ADVERTISEMENT

ಬೆಳಿಗ್ಗೆಯಿಂದ ಸಂಜೆವರೆಗೂ ರಥಬೀದಿ, ವಿರುಪಾಕ್ಷೇಶ್ವರ ದೇವಸ್ಥಾನದ ಒಳಾಂಗಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಮಂಟಪದೊಳಗಿದ್ದ ಆನೆಯ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ರಥಬೀದಿಯ ಸಾಲು ಮಂಟಪದ ನೆರಳಿನಲ್ಲಿ ಕೆಲವರು ವಿಶ್ರಾಂತಿಗೆ ಜಾರಿದ್ದರು. ಎದುರು ಬಸವಣ್ಣ ಹಿಂಬದಿ ಕಲ್ಲುಬಂಡೆ, ಚಕ್ರತೀರ್ಥ ಬಳಿ ಮರಗಳ ನೆರಳಿನಲ್ಲಿ ಕುಳಿತು ಮನೆಯಿಂದ ತಂದಿದ್ದ ಬುತ್ತಿ ಊಟ ಸವಿದರು.

ಯಂತ್ರೋದ್ಧಾರಕ, ಎದುರು ಬಸವಣ್ಣ, ಉದ್ದಾನ ವೀರಭದ್ರ, ಸಾಸಿವೆ ಕಾಳು ಗಣಪ, ಕಮಲ್ ಮಹಲ್, ಮಹಾನವಮಿ ದಿಬ್ಬ, ಪುಷ್ಕರಣಿ, ಗುಪ್ತ ಗೃಹ, ಬಡವಿಲಿಂಗ, ಉಗ್ರ ನರಸಿಂಹ, ರಾಣಿ ಸ್ನಾನಗೃಹ, ಹಜಾರರಾಮ ದೇವಸ್ಥಾನ, ಆನೆ ಸಾಲು, ಕೋಟೆ ಪ್ರದೇಶಗಳಲ್ಲಿ ಜನದಟ್ಟಣೆ ಕಂಡುಬಂತು.

‘ಪ್ರತಿ ವರ್ಷವೂ ಉತ್ಸವಕ್ಕೆ ಬರುತ್ತೇವೆ, ಈ ಬಾರಿ ಉಚಿತ ಸಾರಿಗೆ ಕುಟುಂಬ ಸಮೇತರಾಗಿ ಬರಲು ಸಹಕಾರಿ ಆಯಿತು, ಕೆಲ ಸ್ಥಳ ವೀಕ್ಷಿಸಲು ಸಾಧ್ಯವಾಯಿತು’ ಎಂದು ಮಂಟಪದ ನೆರಳಿಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹಾವೇರಿಯ ಸುಮಂಗಲಮ್ಮ ಅನಿಸಿಕೆ ವ್ಯಕ್ತಪಡಿಸಿದರು.

‘ಆಕಸ್ಮಿಕವಾಗಿ ಭಾರತಕ್ಕೆ ಬಂದಿರುವ ನನಗೆ ಹಂಪಿ ಫೆಸ್ಟಿವಲ್ ನೋಡಿ ತುಂಬಾ ಖುಷಿ ಆಯಿತು. ಈ ಸಂದರ್ಭದಲ್ಲಿ ಹಂಪಿ ನನಗೆ ವಿಶೇಷವಾಗಿ ಕಂಡುಬಂತು. ಇಲ್ಲಿಯ ಐತಿಹಾಸಿಕ ಕುರುಹುಗಳು, ಇಲ್ಲಿಯ ಜನರ ಸಂಸ್ಕೃತಿ ನಮಗೆ ಇಷ್ಟವಾಯಿತು’ ಎಂದು ಉಗ್ರ ನರಸಿಂಹ ವೀಕ್ಷಿಸುತ್ತಿದ್ದ ಲಂಡನ್ ದೇಶದ ಮಹಿಳೆ ಅನ್ನೆ, ಹಂಪಿ ಕುರಿತು ಹೆಮ್ಮೆ‍ಪಟ್ಟರು.

ಹಂಪಿ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ದಟ್ಟಣೆ
ವಸ್ತುಪ್ರದರ್ಶನ ಮಳಿಗೆಯಲ್ಲಿ ಕಂಡ ಜನ
ಹಂಪಿಯ ಮಾತಂಗ ಬೆಟ್ಟದಲ್ಲಿ ಭಾನುವಾರ ಸಂಜೆ ಕಂಡುಬಂದ ದಟ್ಟಣೆ
ಪುಸ್ತಕ ಪ್ರಿಯರಿಗೆ ನಿರಾಸೆವಸ್ತು ಪ್ರದರ್ಶನದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಸರಾಂಗ ಸೇರಿ ಬೆರಳೆಣಿಕೆಯ ಪುಸ್ತಕ ಮಳಿಗೆಗಳಿದ್ದವು. ತಮಗೆ ಇಷ್ಟವಾದ ಪುಸ್ತಕಗಳು ಸಿಗುತ್ತವೆಂದು ಭಾವಿಸಿ ಬಂದಿದ್ದ ಪುಸ್ತಕ ಪ್ರಿಯರಿಗೆ ನಿರಾಸೆ ಉಂಟಾಯಿತು. ಇಂತಹ ದೊಡ್ಡ ಉತ್ಸವದಲ್ಲಿ ಹೆಚ್ಚಿನ ಪುಸ್ತಕ ಮಳಿಗೆಗಳು ಬಂದರೆ ಕನ್ನಡ ಸಾಹಿತ್ಯದ ಪುಸ್ತಕ ಓದಿಸುವ ಅಭಿರುಚಿ ಕನ್ನಡಿಗರಲ್ಲಿ ಮೂಡುತ್ತದೆ. ಆದರೆ ಹೆಚ್ಚಿನ ಪುಸ್ತಕ ಇಲ್ಲದಿರುವುದು ಬೇಸರ ತರಿಸಿತು ಎಂದು ಶಿಕ್ಷಕ ಟಿ.ಮಲ್ಲಿಕಾರ್ಜುನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.