ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಫೇಸ್‌ಬುಕ್ ಖಾತೆಯನ್ನು ಮತ್ತೊಮ್ಮೆ ನಕಲು ಮಾಡಲಾಗಿದ್ದು, ‘ನಿಮ್ಮ ನಂಬರ್ ಕೊಡಿ’ ಎಂದು ಜಿಲ್ಲಾಧಿಕಾರಿ ಅವರೇ ಪೋಸ್ಟ್ ಮಾಡಿದಂತಹ ಸಂದೇಶಗಳು ಮಂಗಳವಾರ ಹಲವರಿಗೆ ತಲುಪಿವೆ.
ನಗರದ ಸಾಹಿತಿ ಮೃತ್ಯುಂಜಯ ರುಮಾಲೆ ಸಹಿತ ಹಲವಾರು ಮಂದಿಗೆ ಜಿಲ್ಲಾಧಿಕಾರಿ ಅವರೇ ಪೋಸ್ಟ್ ಮಾಡಿದ ರೀತಿಯಲ್ಲಿ ಸಂದೇಶಗಳು ರವಾನೆಯಾಗಿವೆ.
‘ಇದು ನಕಲಿ ಖಾತೆ ಎಂಬುದು ನನಗೆ ಗೊತ್ತಿರಲಿಲ್ಲ. ನನ್ನ ನಂಬರ್ ಕೊಡಲೆಂದು ಸೂಚಿಸಿ ಸಂದೇಶ ಬಂದಾಗ ಅಚ್ಚರಿಪಟ್ಟೆ. ಆದರೆ ಇದು ನಕಲಿ ಖಾತೆಯಿಂದ ಬಂದ ಸಂದೇಶ ಎಂದು ಹಿತೈಷಿಯೊಬ್ಬರು ಮಾಹಿತಿ ನೀಡಿದ್ದರಿಂದ ಅದನ್ನು ಬ್ಲಾಕ್ ಮಾಡಿದೆ’ ಎಂದು ಮೃತ್ಯುಂಜಯ ರುಮಾಲೆ ತಿಳಿಸಿದರು. ಇದೇ ರೀತಿ ಇನ್ನೂ ಕೆಲವರು ಕರೆ ಮಾಡಿ ತಮಗೆ ಆದ ಅನುಭವವನ್ನೂ ಹೇಳಿಕೊಂಡರು.
ಇದು ಮೂರನೇ ಬಾರಿ: ‘ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿಲ್ಲ, ಇದು ನಕಲಿ ಖಾತೆ, ಉತ್ತರ ಪ್ರದೇಶದಲ್ಲಿ ಕುಳಿತು ಯಾರೋ ನಕಲು ಮಾಡಿದ್ದಾರೆ. ಮೂರನೇ ಬಾರಿಗೆ ಇಂತಹ ಘಟನೆ ನಡೆದಿದೆ. ಈ ಹಿಂದೆ ಇಂತಹದೇ ಪ್ರಸಂಗ ನಡೆದಾಗ ದೂರು ಕೊಟ್ಟಿದ್ದೆ. ಇಂತಹ ನಕಲಿ ಪೋಸ್ಟ್‌ಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ದಿವಾಕರ್ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.