ADVERTISEMENT

ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 2:14 IST
Last Updated 27 ಡಿಸೆಂಬರ್ 2025, 2:14 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ಹೊಸಪೇಟೆ (ವಿಜಯನಗರ): ‘ರೈತರು ಬೆಳೆಯುವ ಬೆಳೆಗೆ ನಿಜವಾಗಿ ತಗಲುವ ವೆಚ್ಚಕ್ಕೆ ಶೇ 50ರಷ್ಟು ಮೊತ್ತವನ್ನು ಸೇರಿಸಿ (ಸಿ2+50) ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್ ಅವರ ಸೂತ್ರವಾಗಿತ್ತು, ಅದರಂತೆ ನಡೆದುಕೊಂಡರೆ ಯಾವ ಸಮಸ್ಯೆಯೂ ಇರುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾಮಿನಾಥನ್ ಅವರು ಹಲವು ವರ್ಷ ದೇಶದಾದ್ಯಂತ ಸುತ್ತಾಡಿ ತಮ್ಮ ವರದಿ ಸಿದ್ಧಪಡಿಸಿದ್ದರು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವರದಿಯನ್ನು ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸಿವೆ ಹಾಗೂ ಕಣ್ಣೊರೆಸುವ ತಂತ್ರವಾಗಿ ಬೆಲೆ ನಿಗದಿಪಡಿಸಿ ರೈತರಿಗೆ ಅದರ ಪ್ರಯೋಜನ ಸಿಗದಂತೆ ಮಾಡುತ್ತಿವೆ’ ಎಂದರು.

‘7ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ ಒಮ್ಮೆಲೇ ₹85 ಸಾವಿರ ಕೋಟಿಯನ್ನು ಸರ್ಕಾರಿ ನೌಕರರ ಸಂಬಳಕ್ಕೆಂದು ಒದಗಿಸಿತು. ಇದಕ್ಕೆ ನನ್ನ ಆಕ್ಷೇಪ ಇಲ್ಲ, ಆದರೆ ಕೃಷಿಕರ ವಿಚಾರದಲ್ಲಿ ಮಾತ್ರ ಸರ್ಕಾರ ಒಂದಿಷ್ಟು ಉದಾರವಾಗಿ ನಡೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ರೈತರ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಸಿಗಬೇಕಾದರೆ ₹10 ಸಾವಿರ ಕೋಟಿಯ ಆವರ್ತ ನಿಧಿಯನ್ನು ತಕ್ಷಣ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮಧ್ಯವರ್ತಿಗಳ ದಂಧೆ ಮೀರಿ ನಿಲ್ಲಬೇಕಾದರೆ ವರ್ಷವಿಡೀ ಬೆಂಬಲ ಬೆಲೆಯಲ್ಲಿ ರೈತರ ವಿವಿಧ ಬೆಳೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕು’ ಎಂದರು.

ರೈತರಿಗೆ ಅಧಿಕಾರ: ‘ಮುಂದಿನ ದಿನಗಳಲ್ಲಿ ರೈತರು ರಾಜಕೀಯವಾಗಿ ಬೆಳವಣಿಗೆ ಕಾಣಬೇಕಿದ್ದು, ರೈತರದ್ದೇ ಪಕ್ಷ ಸ್ಥಾಪನೆಯ ಕುರಿತಂತೆ ಪ್ರಯತ್ನಗಳು ಆರಂಭವಾಗಿವೆ’ ಎಂದು  ಹೇಳಿದರು.

ರೈತ ಮುಖಂಡ ಖಾಜಾ ಹುಸೇನ್ ನಿಯಾಜಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್‌, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಆರ್‌.ಎಲ್.ತಾಯಪ್ಪ, ಹನುಮಂತಪ್ಪ ಹೊಳೆಯಾಚಿ, ಜಡಿಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.