ADVERTISEMENT

ಮೂರು ದಿನ ಲಾಕ್‌ಡೌನ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮೇ 2021, 13:46 IST
Last Updated 19 ಮೇ 2021, 13:46 IST

ಹೊಸಪೇಟೆ (ವಿಜಯನಗರ): ಐದು ದಿನ ನಿರಂತರವಾಗಿ ಲಾಕ್‌ಡೌನ್‌ ಮಾಡುವುದರ ಬದಲು ಮೂರು ದಿನ ಸಂಪೂರ್ಣ ಲಾಕ್‌ಡೌನ್‌, ಎರಡು ದಿನ ಸೆಮಿ ಲಾಕ್‌ಡೌನ್‌ ಮಾಡಬೇಕೆಂದು ವಿಜಯನಗರ ನಾಗರಿಕರ ವೇದಿಕೆ ಅಧ್ಯಕ್ಷ ವೈ. ಯಮುನೇಶ್‌ ಆಗ್ರಹಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗುತ್ತಿರುವ ಐದು ಜಿಲ್ಲೆಗಳ ಪೈಕಿ ಬಳ್ಳಾರಿ, ವಿಜಯನಗರ ಜಿಲ್ಲೆಗಳು ಸೇರ್ಪಡೆಯಾಗಿರುವುದು ಕಳವಳಕಾರಿ ಸಂಗತಿ. ಗುರುವಾರದಿಂದ ಶನಿವಾರದವರೆಗೆ ಪೂರ್ಣ ಲಾಕ್‍ಡೌನ್ ಜಾರಿಗೊಳಿಸಿ ಭಾನುವಾರ ಸೆಮಿಲಾಕ್ ಡೌನ್ ಮಾಡಬೇಕು. ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸುವುದು. ಸೋಮವಾರ, ಮಂಗಳವಾರ ಪೂರ್ಣ ಲಾಕ್‍ಡೌನ್ ಜಾರಿ ಹಾಗೂ ಬುಧವಾರದಂದು ಸೆಮಿ ಲಾಕ್‍ಡೌನ್ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ದೈನಂದಿನ ದುಡಿಮೆ ಹಾಗೂ ವಾರದ ಕೂಲಿ ಮೇಲೆ ಅವಲಂಬನೆಯಾದವರಿಗೆ ಶನಿವಾರ ಸಂಜೆ ಕೂಲಿಯ ಹಣ ದೊರೆಯುವುದರಿಂದ ಭಾನುವಾರ ಜೀವನಾವಶ್ಯಕ ವಸ್ತು ಖರೀದಿಗೆ ಅನುಕೂಲವಾಗುತ್ತದೆ. ಸರ್ಕಾರಿ ನೌಕರರು ಹಾಗೂ ಇತರೆ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಭಾನುವಾರ ರಜೆ ಇರುವುದರಿಂದ ಆ ದಿನ ಜೀವನಾವಶ್ಯಕ ವಸ್ತು ಖರೀದಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾನುವಾರ ಪೂರ್ಣ ಲಾಕ್‍ಡೌನ್ ಸೂಕ್ತವಲ್ಲ. ಕೆಲ ದಿನ ಪೂರ್ಣ, ಕೆಲವು ದಿನ ಸೆಮಿ ಲಾಕ್‌ಡೌನ್‌ ವ್ಯವಸ್ಥೆ ಮಹಾರಾಷ್ಟ್ರದಲ್ಲಿ ಯಶಸ್ಸು ಕಂಡಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.