ADVERTISEMENT

ವಿಜಯನಗರ | ದೇವದಾಸಿ ಕಾಯ್ದೆ: ಜಿಲ್ಲೆಯಲ್ಲಿ ಸಂಚಲನ

ಎಂ.ಜಿ.ಬಾಲಕೃಷ್ಣ
Published 23 ಆಗಸ್ಟ್ 2025, 3:14 IST
Last Updated 23 ಆಗಸ್ಟ್ 2025, 3:14 IST
<div class="paragraphs"><p>ದೇವದಾಸಿ</p></div>

ದೇವದಾಸಿ

   

ಹೊಸಪೇಟೆ (ವಿಜಯನಗರ): ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆಗೆ ವಿಧಾನಮಂಡಲದ ಅಂಗೀಕಾರ ಸಿಕ್ಕಿದ್ದು, ಇದರಿಂದ ಅತಿ ಹೆಚ್ಚು ಮಾಜಿ ದೇವದಾಸಿಯರು ಇರುವ ವಿಜಯನಗರ ಜಿಲ್ಲೆಯಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಗರಿಗೆದರಿದೆ.

ಸರ್ಕಾರೇತರ ಸಂಘಟನೆ (ಎನ್‌ಜಿಒ) ಸಖಿ ಟ್ರಸ್ಟ್‌ ಕಳೆದ ಎಂಟು ವರ್ಷಗಳಿಂದ ನಡೆಸುತ್ತ ಬಂದಿರುವ ಸತತ ಪ್ರಯತ್ನ, ಇತರ 14 ಜಿಲ್ಲೆಗಳಲ್ಲಿ ಇಂತಹದೇ ಸಂಘಟನೆಗಳು, ವ್ಯಕ್ತಿಗಳು, ಇಲಾಖೆಗಳು ಮಾಡಿದ ಕ್ಷೇತ್ರ ಕಾರ್ಯಗಳು, ಸಮೀಕ್ಷೆಗಳು ಫಲ ನೀಡಿದ್ದು, ಮುಂದಿನ ದಿನಗಳಲ್ಲಿ ಮಾಜಿ ದೇವದಾಸಿಯರ ಮಕ್ಕಳು ‘ಅಪ್ಪ ಯಾರು’ ಎಂಬ ಕೊಂಕು ಮಾತಿಗೆ ಎಡೆ ಇಲ್ಲದ ರೀತಿಯಲ್ಲಿ ಬದುಕು ಸಾಗಿಸುವ ಹಾದಿ ಸುಗಮವಾಗಿದೆ.

ADVERTISEMENT

ಬುನಾದಿಯಾದ ಸಮೀಕ್ಷೆ: ‘ಮಿಷನ್‌ ವಿಜಯ ವನಿತೆ’ ಎಂಬ ಜಿಲ್ಲಾ ಮಟ್ಟದ ಸಹಾಯವಾಣಿ ಸ್ಥಾಪಿಸಿ ದೇವದಾಸಿಯರ ಸಮಗ್ರ ಸಮೀಕ್ಷೆ ನಡೆಸಲು ಸಖಿ ಟ್ರಸ್ಟ್‌ಗೆ ಅಂದಿನ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಹೊಣೆಗಾರಿಕೆ ವಹಿಸಿದಾಗ ಹೊಟ್ಟೆಕಿಚ್ಚು ಪಟ್ಟವರು ಅನೇಕ ಮಂದಿ. ಒಂದೇ ವರ್ಷದಲ್ಲಿ ನಾವು ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ದೇವದಾಸಿಯರ  ಮನೆಗಳಿಗೆ ಭೇಟಿ ನೀಡಿ ಸಮಗ್ರ ಸಮೀಕ್ಷೆ ನಡೆಸಿದ್ದೆವು. ದೇವದಾಸಿಯರ ಎಂಟು ಮಂದಿ ಮಕ್ಕಳೇ ಈ ಸಮೀಕ್ಷೆ ನಡೆಸಿದ್ದರು. ಡಿಎಂಎಫ್ ನಿಧಿಯ ಈ ಯೋಜನೆ ಮತ್ತೂ ಎರಡು ವರ್ಷ ನಡೆಯಬೇಕಿತ್ತು, ಆದರೆ ಅದನ್ನು ಸ್ಥಗಿತಗೊಳಿಸಲಾಯಿತು. ಆದರೆ ಆ ಒಂದು ವರ್ಷ ಮಾಡಿದ ಕೆಲಸವೇ ಈ ಕಾಯ್ದೆ ರೂಪುಗೊಳ್ಳುವುದಕ್ಕೆ ಬುನಾದಿಯಾಯಿತು’ ಎಂದು ಸಖಿ ಟ್ರಸ್ಟ್‌ನ ಸಂಸ್ಥಾಪಕ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ ಹೇಳಿದರು.

ದೇವದಾಸಿ ಸಮಸ್ಯೆಯನ್ನು ದೇವದಾಸಿಯರ ಮಕ್ಕಳಿಂದಲೇ ಬಗೆಹರಿಸಿಕೊಳ್ಳಬೇಕು ಎಂಬುದು ಟ್ರಸ್ಟ್‌ನ ನಿಲುವಾಗಿದೆ. ಅದಕ್ಕಾಗಿಯೇ ಅವರಿಗೆ ನಾಯಕತ್ವ ವೃದ್ಧಿಗಾಗಿ ಸತತ ಎರಡು ವರ್ಷಗಳ ತರಬೇತಿ ನೀಡಲಾಗಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ ಯುನಿವರ್ಸಿಟಿಯ ಪ್ರೊ.ಆರ್.ವಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ದೇವದಾಸಿಯರ ಮಕ್ಕಳೇ ಆರು ತಿಂಗಳ ಕಾಲ ಕ್ಷೇತ್ರ ಕಾರ್ಯ ನಡೆಸಿ ಕಾಯ್ದೆ ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದರು. ಸಂಘಟಿತ ಪ್ರಯತ್ನದಿಂದ ಇದೆಲ್ಲ ಸಾಧ್ಯವಾಗಿದೆ’ ಎಂದು ಅವರು ಹೇಳಿದರು.

ಮತ್ತೆ ಕೇಳಿದ್ದಾರೆ ಸಲಹೆ: ಕಾಯ್ದೆ ರೂಪುಗೊಂಡಿದೆ. ದೇವದಾಸಿ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಹೇಗೆ? ಪುನರ್ವಸತಿಯ ಯೋಜನೆ ಏನಿದೆ ಮೊದಲಾದ ವಿಷಯಗಳಲ್ಲಿ ಸಲಹೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಸಖಿ ಟ್ರಸ್ಟ್‌ ಅನ್ನು ಕೇಳಿಕೊಂಡಿದೆ ಎಂದು ಹೇಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜತೆಗೆ ಸೇರಿಕೊಂಡು ಕೆಲಸ ಮಾಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಿರುವ ಕಾರಣ ಹೊಸ ಹುಮ್ಮಸ್ಸಿನೊಂದಿಗೆ ಕೆಲಸಗಳಾಗುವ ನಿರೀಕ್ಷೆ ಹೆಚ್ಚಿದೆ.

ಕಾಯ್ದೆ ಜಾರಿಗೆ ತರುವ ಮುತುವರ್ಜಿ ವಹಿಸಿದ ಸರ್ಕಾರಕ್ಕೆ ಕೃತಜ್ಞತೆಗಳು. ಈ ಕಾಯ್ದೆ ದೇವದಾಸಿ ಪದ್ಧತಿಯ ನಿರ್ಮೂಲನೆ ನಿಷೇಧ ಮತ್ತು ಸಮಗ್ರ ಪುನರ್ವಸತಿಗೆ ದೊಡ್ಡ ಶಕ್ತಿಯಾಗುವ ವಿಶ್ವಾಸ ಈಗ ಬಂದಿದೆ
ಎಂ.ಭಾಗ್ಯಲಕ್ಷ್ಮಿ ಸಂಸ್ಥಾಪಕ ನಿರ್ದೇಶಕರು ಸಖಿ ಟ್ರಸ್ಟ್‌

4680 ಮನೆ ಬೇಕು

‘ವಿಜಯನಗರ ಜಿಲ್ಲೆಯಲ್ಲಿ ನಡೆಸಲಾದ ಸಮೀಕ್ಷೆಯಂತೆ 4680 ಮಾಜಿ ದೇವದಾಸಿಯರಿಗೆ ಮನೆ ಇಲ್ಲ. ಇವರಿಗೆ ಮನೆ ಒದಗಿಸಬೇಕು ಎಂದು ವಸತಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೆಡಿಪಿ ಸಭೆಯಲ್ಲೂ ಇದರ ಬಗ್ಗೆ ಚರ್ಚೆ ನಡೆದಿದೆ. ಆದರೆ ಇದುವರೆಗೆ ಈ ವಿಷಯದಲ್ಲಿ ಯಾವ ಪ್ರಗತಿಯೂ ಆಗಿಲ್ಲ’ ಎಂದು ಭಾಗ್ಯಲಕ್ಷ್ಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.