ADVERTISEMENT

ಹರಪನಹಳ್ಳಿ | ರಾಗಿ ಬಿತ್ತನೆ ದುಪ್ಪಟ್ಟು; ಉತ್ತಮ ಇಳುವರಿ ನಿರೀಕ್ಷೆ

ಹರಪನಹಳ್ಳಿ: ಹಿಂಗಾರು ಬೆಳೆ ರಾಗಿಗೆ ಬೆಂಬಲ ಬೆಲೆ ನೀಡುವಂತೆ ರೈತರ ಒತ್ತಾಯ

ವಿಶ್ವನಾಥ ಡಿ.
Published 24 ಫೆಬ್ರುವರಿ 2025, 6:17 IST
Last Updated 24 ಫೆಬ್ರುವರಿ 2025, 6:17 IST
<div class="paragraphs"><p>ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ವ್ಯಾಪ್ತಿಯ ಜಮೀನಿನಲ್ಲಿ ರಾಗಿ ಬೆಳೆದಿರುವುದು</p></div>

ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ವ್ಯಾಪ್ತಿಯ ಜಮೀನಿನಲ್ಲಿ ರಾಗಿ ಬೆಳೆದಿರುವುದು

   

ಹರಪನಹಳ್ಳಿ: ಉತ್ತಮ ಮಳೆ ಸುರಿದು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವ ಪರಿಣಾಮ ರಾಗಿ ಬಿತ್ತನೆ ಪ್ರದೇಶ ದುಪ್ಪಟ್ಟಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಗೂ ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ತಾಲ್ಲೂಕಿನ ರೈತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಯಡಿ ನದಿಯಿಂದ 51 ಗ್ರಾಮಗಳ ಒಟ್ಟು 52 ಕೆರೆಗಳಿಗೆ ನೀರು ಹರಿಸಲಾಗಿದೆ. ಇದರ ಜೊತೆಗೆ ಪ್ರಸಕ್ತ ವರ್ಷ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದು ಜಲಮೂಲಗಳಲ್ಲಿ ನೀರಿನ ಲಭ್ಯತೆ ಇದೆ. ಕಬ್ಬು ಬೆಳೆಯಿಂದ ವಿಮುಖರಾಗಿರುವವರು, ಮೆಕ್ಕೆಜೋಳ ಕಟಾವು ಮಾಡಿ ನೀರಾವರಿ ಇರುವ ಅನೇಕ ರೈತರು ರಾಗಿಯತ್ತ ಮುಖ ಮಾಡಿದ್ದರಿಂದಾಗಿ ರಾಗಿ ಬೆಳೆ ಬಿತ್ತನೆ ಸಹಜವಾಗಿ ದುಪ್ಪಟ್ಟಾಗಿದೆ.

ADVERTISEMENT

‘ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಗಾರರ ಹೆಸರು ನೋಂದಾಯಿಸುವುದು ಡಿ.31ಕ್ಕೆ ಮುಕ್ತಾಯಗೊಂಡಿದೆ. ಎಪಿಎಂಸಿ ಪ್ರಾಂಗಣದಲ್ಲಿ ರಾಗಿ ಖರೀದಿಸುತ್ತಿದ್ದು, ಸರ್ಕಾರ ಕ್ವಿಂಟಲ್‌ವೊಂದಕ್ಕೆ ₹4,290 ನಿಗದಿ ಗೊಳಿಸಿದೆ. ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದ ಜಮೀನಿನಲ್ಲಿ ರಾಗಿ ಬೆಳೆಯಲಾಗಿದ್ದು, ಸರ್ಕಾರ ಹಿಂಗಾರು ಬೆಳೆಗೂ ಬೆಂಬಲ ಬೆಲೆ ಘೋಷಿಸಬೇಕು’ ಎನ್ನುತ್ತಾರೆ ರೈತ ಅರಸೀಕೆರೆ ನವೀನ್ .

‘ಮುಂಗಾರು ಹಂಗಾಮಿನಲ್ಲಿ 2022-23ನೇ ಸಾಲಿನಲ್ಲಿ 3,426 ಹೆಕ್ಟೇರ್, 2023-24ರಲ್ಲಿ 4429 ಹೆಕ್ಟೇರ್ ಹಾಗೂ ಪ್ರಸಕ್ತ ಸಾಲಿನಲ್ಲಿ 5,942 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. 2022-23ನೇ ಸಾಲಿನಲ್ಲಿ 15,803 ಹೆಕ್ಟೇರ್, 2023-24ರಲ್ಲಿ 20,302 ಹೆಕ್ಟೇರ್ ಹಾಗೂ 2024-25ನೇ ಸಾಲಿನಲ್ಲಿ 33,497 ಹೆಕ್ಟೇರ್ ಜಮೀನಿನಲ್ಲಿ ರಾಗಿ ಬಿತ್ತನೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಈ ಬಾರಿ ರಾಗಿ ಬೆಳೆ ಚೆನ್ನಾಗಿ ಬೆಳೆದಿದ್ದು, ರೈತರು ಉತ್ತಮ ಇಳುವರಿಯ  ನಿರೀಕ್ಷೆಯಲ್ಲಿದ್ದಾರೆ’ ಎಂದು ಕೃಷಿ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಂಗಾರಿನಲ್ಲಿ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ರಾಗಿ ಬೆಳೆಯ ಪ್ರದೇಶದ ವಿಸ್ತಾರ ಚಿಗಟೇರಿ ಹೋಬಳಿಯಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಹಿಂಗಾರಿನಲ್ಲಿ ಅರಸೀಕೆರೆ, ಚಿಗಟೇರಿ, ಹರಪನಹಳ್ಳಿ ಕಸಾಬ ಮತ್ತು ತೆಲಿಗಿ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆ ಪ್ರದೇಶ ದುಪ್ಪಟ್ಟಾಗಿದೆ.

ಹರಪನಹಳ್ಳಿ ಎಪಿಎಂಸಿಗೆ ರಾಗಿ ಸಾಗಿಸಲು ರೈತರಿಗೆ ಆರ್ಥಿಕ ಹೊರೆ ಆಗುತ್ತದೆ. ಎರಡು ವರ್ಷದ‌‌ ಹಿಂದೆ ಇದ್ದಂತೆ ಅರಸೀಕೆರೆ ಹೋಬಳಿ ಕೇಂದ್ರದಲ್ಲಿ ಹೆಚ್ಚುವರಿ‌ ಖರೀದಿ ಕೇಂದ್ರ‌ ತೆರೆಯಬೇಕು
ಎನ್.ನವೀನ್ ಯುವ ರೈತ ಅರಸೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.