ADVERTISEMENT

ಅರಸೀಕೆರೆ: ರಂಗಭೂಮಿ ಕಲಾವಿದ ಪೂಜಾರ್ ಚಂದ್ರಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 13:48 IST
Last Updated 8 ಅಕ್ಟೋಬರ್ 2024, 13:48 IST
<div class="paragraphs"><p>ಪೂಜಾರ್ ಚಂದ್ರಪ್ಪ </p></div>

ಪೂಜಾರ್ ಚಂದ್ರಪ್ಪ

   

ಅರಸೀಕೆರೆ: ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಭೂಮಿ ಕಲಾವಿದ ಪೂಜಾರ್ ಚಂದ್ರಪ್ಪ (76) ಮಂಗಳವಾರ ಇಲ್ಲಿನ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪುತ್ರ, ಪ್ರಾಂಶುಪಾಲ ಪೂಜಾರ್‌ ದುರುಗೇಶ್‌, ಇಬ್ಬರು ಪುತ್ರಿಯರು ಇದ್ದಾರೆ.

ADVERTISEMENT

ಪೂಜಾರ್ ಚಂದ್ರಪ್ಪ ಕೇವಲ ಎರಡನೇ ತರಗತಿ ಓದಿದ್ದರೂ ರಂಗಭೂಮಿ ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ದಂಡಿನ ದುರ್ಗಮ್ಮ (ದುರ್ಗಮಾತಾ ಅವತಾರ) ನಾಟಕದಲ್ಲಿ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿದ್ದರು. ಅತಿ ಜನಪ್ರಿಯಗಳಿಸಿದ ನಾಟಕವು ರಾಜ್ಯದ ವಿವಿಧೆಡೆಗಳಲ್ಲಿ 267 ಪ್ರದರ್ಶನ ಕಂಡಿತ್ತು.

'ಜಗಜ್ಯೋತಿ ಬಸವೇಶ್ವರ', 'ದುರ್ಗದ ದೊರೆ ಅರ್ಥಾತ್ ರಾಜ್ಯದಲ್ಲಿ ಗಂಡುಗಲಿ', ಸೇರಿದಂತೆ ಐವತ್ತಕ್ಕೂ ಹೆಚ್ಚಿನ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.

‘ಕೊಂಡು ತಂದ ಗಂಡ’, ‘ಹೆಜ್ಜೆ ತಪ್ಪದ ಹೆಣ್ಣು’, ‘ಗಂಡನ ಮಾನ’, ‘ಪತಿ ಭಕ್ತೆ’ ಸೇರಿದಂತೆ ಅನೇಕ ನಾಟಕದ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದರು.

ರಂಗಭೂಮಿಯಲ್ಲಿ ಇವರ ಸೇವೆಯನ್ನು ಗುರುತಿಸಿ 2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗ್ರಾಮೀಣ ಸಿರಿ, ಜಿಲ್ಲಾ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ರಾಮೀಣ ರಂಗ ಹಬ್ಬ, ಶ್ರೀ ಜಯದೇವ ಗೌರವ ಪುರಸ್ಕಾರ ಪಂಚಮ ಶ್ರೀ ಸೇರಿದಂತೆ 20ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ.

ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಮನ್ನಣೆ ಗಳಿಸಿದ್ದ ಅವರು ತಾಲ್ಲೂಕು ಪಂಚಾಯತಿ ಸದಸ್ಯ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಪೂಜಾರ್ ಚಂದ್ರಪ್ಪ ಅವರ ಕುರಿತ 'ಬಣ್ಣ ಮತ್ತು ಬದುಕು ' ಎಂಬ ಅಭಿನಂದನಾ ಗ್ರಂಥ ರಚನೆಯಾಗಿದೆ.

ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ಪೂಜಾರ್ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.