ಹೊಸಪೇಟೆ (ವಿಜಯನಗರ): ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಮತ್ತು ಇತರ ಯೋಜನೆಗಳಿಗೆ ಬಳಸುವುದು ತಪ್ಪು, ಜತೆಗೆ ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಶೇ 75ರಷ್ಟು ಅಂಕ ಮಿತಿ ಹೇರಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಹೇಳಿದೆ.
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಎ.ಚಿದಾನಂದ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ, ವಿದ್ಯಾರ್ಥಿ ವೇತನ ವಿಚಾರದಲ್ಲಿ ಈ ಹಿಂದೆ ಇದ್ದಂತೆಯೇ ನಿಯಮ ಇರಬೇಕು, ಸರ್ಕಾರ ತಕ್ಷಣ ತನ್ನ ಹೊಸ ಆದೇಶ ಹಿಂಪಡೆಯಬೇಕು ಎಂದರು.
ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಅವರ ಅಭಿವೃದ್ಧಿ ಕಾರ್ಯಗಳಿಗೇ ಬಳಸಬೇಕೇ ಹೊರತು, ಗ್ಯಾರಂಟಿ ಯೋಜನೆಗಳಿಗೆ ಬಳಸಿ ಪರಿಶಿಷ್ಟರಿಗೂ ಸಹಾಯವಾಗಿದೆ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಈ ಸರ್ಕಾರವೂ ಹಲವು ಹಗರಣಗಳಲ್ಲಿ ಮುಳುಗಿ ಹೋಗಿದ್ದು, ಹಿಂದಿನ ಸರ್ಕಾರದತ್ತ ಬೆಟ್ಟು ಮಾಡುವುದೂ ನಾಚಿಕೆಗೇಡು ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಜಿ.ಹನುಮಂತಪ್ಪ, ತಾಲ್ಲೂಕು ಸಂಚಾಲಕ ದೇವರಾಜ ಬರಗೂರು,ಶರಣಪ್ಪ, ವೀರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.