ಹೊಸಪೇಟೆ (ವಿಜಯನಗರ): ಮೊದಲ ವಿವಾಹವನ್ನು ಮರೆ ಮಾಚಿ ಮತ್ತೊಬ್ಬನ ಜೊತೆ ಮದುವೆಯಾಗಿದ್ದ ಮಹಿಳೆಯೊಬ್ಬರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ಜೆಎಂಎಫ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಟಿಬಿ ಡ್ಯಾಂ ನಿವಾಸಿಯಾಗಿದ್ದ ಹಾಗೂ ಹಾಲಿ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಆಲಹಳ್ಳಿ ಗ್ರಾಮದ ದೇವಿಕಾ ಜೈಲು ಶಿಕ್ಷೆಗೆ ಗುರಿಯಾದವರು.
ದೇವಿಕಾ ಅವರಿಗೆ 2008ರಲ್ಲಿ ಟಿ.ಬಿ.ಡ್ಯಾಂ ನಿವಾಸಿ ಜೆ.ಸತ್ಯನಾರಾಯಣ ಎಂಬುವವರೊಂದಿಗೆ ವಿವಾಹವಾಗಿ, ಇಬ್ಬರು ಮಕ್ಕಳಿದ್ದಾರೆ. ಆದರೂ, ಕೌಟುಂಬಿಕ ಕಲಹ ಕಾರಣಕ್ಕೆ ಮೊದಲ ಪತಿಯಿಂದ ದೂರವಾಗಿ, 2014ರಲ್ಲಿ ಭಾಲ್ಕಿ ತಾಲ್ಲೂಕಿನ ಆಲಹಳ್ಳಿ ಗ್ರಾಮದ ಅಂಬರೀಶ್ ಎಂಬುವವರೊಂದಿಗೆ ರಿಜಿಸ್ಟರ್ ಮದುವೆ ಆಗಿದ್ದರು. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಅಕ್ರಮವಾಗಿ ಎರಡನೇ ಮದುವೆ ಮಾಡಿಕೊಂಡು, ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಜೆ.ಸತ್ಯನಾರಾಯಣ ಟಿ.ಬಿ.ಡ್ಯಾಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಅಶೋಕ್ ಆರ್.ಎಚ್., ಆರೋಪಿ ದೇವಿಕಾಗೆ ಎರಡು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದರು. ದಂಡ ಪಾವತಿಸಲು ಸಾಧ್ಯವಾಗದಿದ್ದರೆ, ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ಎಂ.ಟಿ ರೇವಣಸಿದ್ದಪ್ಪ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.