ADVERTISEMENT

ಕೃಷಿ ಕಾಯ್ದೆ ವಾಪಸಾತಿಗೆ ಆಗ್ರಹ; ಎರಡು ಗಂಟೆ ಹೆದ್ದಾರಿ ತಡೆದು ಪ್ರತಿಭಟನೆ

ವಿದ್ಯುತ್‌ ಕ್ಷೇತ್ರದ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 12:45 IST
Last Updated 26 ನವೆಂಬರ್ 2021, 12:45 IST
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆತಡೆ ಚಳವಳಿ ನಡೆಸಿದರು
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆತಡೆ ಚಳವಳಿ ನಡೆಸಿದರು   

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಗಂಟೆಗೂ ಅಧಿಕ ಕಾಲ ರಸ್ತೆತಡೆ ಚಳವಳಿ ನಡೆಸಿದರು.

ಟಿ.ಬಿ. ಡ್ಯಾಂ ಬಳಿಯ ಗಣೇಶ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಶಾಮಿಯಾನ ಹಾಕಿ ಧರಣಿ ನಡೆಸಿದರು. ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾರ ತಡೆದರು. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

ರಸ್ತೆತಡೆ ಚಳವಳಿಯ ವಿಷಯ ಅರಿತು ಪೊಲೀಸರು, ವಿಜಯಪುರದ ಕಡೆಯಿಂದ ಬಂದ ವಾಹನಗಳಿಗೆ ಹುಲಿಗಿ ಮೂಲಕ, ಬೆಂಗಳೂರು ಕಡೆಯಿಂದ ಬಂದ ವಾಹನಗಳಿಗೆ ಹರಿಹರ ರಸ್ತೆಯ ಮೂಲಕ ಸಂಚರಿಸಲು ಅನುವು ಮಾಡಿಕೊಟ್ಟರು. ಸಾರಿಗೆ ಸಂಸ್ಥೆಯ ಬಸ್ಸುಗಳು, ಸರಕು ಸಾಗಣೆ ವಾಹನಗಳು ಈ ಮಾರ್ಗವಾಗಿ ಸಂಚರಿಸಿದವು. ಇನ್ನೂ ಬೃಹತ್‌ ಸರಕು ಸಾಗಣೆ ಲಾರಿಗಳು ಹೆದ್ದಾರಿ ಪಕ್ಕದಲ್ಲೇ ನಿಂತಿದ್ದವು. ದೈನಂದಿನ ಕೆಲಸಕ್ಕೆ ಹೋಗುವವರು ತೀವ್ರ ತೊಂದರೆ ಅನುಭವಿಸಿದರು. ಅನೇಕರು ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲಿ ಹೊಸಪೇಟೆ, ಮುನಿರಾಬಾದ್ ಕಡೆ ತೆರಳಿದರು.

ADVERTISEMENT

ಧರಣಿಗೂ ಮುನ್ನ ರೈತರು ನಗರದ ಸಾಯಿಬಾಬಾ ವೃತ್ತದ ಬಳಿ ಸೇರಿದರು. ಈ ವೇಳೆ ಅದೇ ಮಾರ್ಗದಿಂದ ಹಾದು ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಪ್ರತಿಭಟನಾಕಾರರನ್ನು ಭೇಟಿ ಮಾಡಿದರು. ನಂತರ ಪ್ರತಿಭಟನಾಕಾರರು ಅಲ್ಲಿಂದ ಹೆದ್ದಾರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡ ಜೆ. ಕಾರ್ತಿಕ್‌, ‘ರಾಜ್ಯ ಸರ್ಕಾರ ತಡಮಾಡದೆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಅದಷ್ಟೇ ಅಲ್ಲ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಕೂಡ ವಾಪಸ್‌ ಪಡೆಯಬೇಕು. ಬಿ.ಎಸ್‌. ಯಡಿಯೂರಪ್ಪನವರು ರೈತರ ಮಗ ಎಂದು ಹೇಳಿಕೊಂಡು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಆ ಕರಾಳ ಕಾಯ್ದೆಗಳನ್ನು ಬಸವರಾಜ ಬೊಮ್ಮಾಯಿಯವರು ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಇತ್ತೀಚೆಗೆ ಸುರಿದ ಮಳೆಯಿಂದ ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರ ಸೇರಿದಂತೆ ರಾಜ್ಯದಾದ್ಯಂತ ಅಪಾರ ಹಾನಿಯಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೆಣಸಿನಕಾಯಿ, ಭತ್ತ, ಕಬ್ಬು, ಈರುಳ್ಳಿ, ತೊಗರಿ, ಬಾಳೆ, ಮೆಕ್ಕೆಜೋಳ, ಶೇಂಗಾ, ಜೋಳ ಹಾಳಾಗಿದೆ. ಸದ್ಯದ ಮಾರುಕಟ್ಟೆಯ ಬೆಲೆಗೆ ತಕ್ಕಂತೆ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಚಳವಳಿ ಬಳಿಕ ನಡೆದ ಅತಿ ದೊಡ್ಡ ಹೋರಾಟ ರೈತರ ಹೋರಾಟ. ಈ ಹೋರಾಟದಲ್ಲಿ ದೇಶದ ಯುವಕರು, ಮಹಿಳೆಯರು, ಕಾರ್ಮಿಕರು ಪಾಲ್ಗೊಂಡಿರುವುದು ವಿಶೇಷ. ಒಂದು ವರ್ಷದ ಸುದೀರ್ಘ ಹೋರಾಟ ಜಗತ್ತಿನಲ್ಲಿ ಎಲ್ಲೂ ನಡೆದಿಲ್ಲ. ಅಂತರರಾಷ್ಟ್ರೀಯ ಒತ್ತಡ, ಮುಂಬರುವ ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಅದಕ್ಕೆ ಹೆದರಿ ನರೇಂದ್ರ ಮೋದಿ ಕಾಯ್ದೆ ವಾಪಸ್‌ ಪಡೆದಿದ್ದಾರೆ. ಆದರೆ, ಒಂದು ವರ್ಷದಲ್ಲಿ 700ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕೆ ಯಾರು ಹೊಣೆಗಾರರು?’ ಎಂದು ಪ್ರಶ್ನಿಸಿದರು.

‘ರೈತರ ಒಂದು ಸಣ್ಣ ವರ್ಗಕ್ಕೆ ಮೂರು ಕೃಷಿ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ನಾವು ವಿಫಲರಾಗಿದ್ದೇವೆ. ಹೀಗಾಗಿ ಕೃಷಿ ಕಾಯ್ದೆ ವಾಪಸ್‌ ಪಡೆಯಲು ನಿರ್ಧರಿಸಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ಇದು ಸುಳ್ಳು. ಈ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಬಂಡವಾಳಷಾಹಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶ ಇತ್ತು. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಒಂದೊಂದಾಗಿ ಖಾಸಗೀಕರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ, ‘ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಕೈಬಿಡಬೇಕು. ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೆಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಎನ್‌. ಯಲ್ಲಾಲಿಂಗ, ಕೆ.ಎಂ. ಸಂತೋಷ್‌ ಕುಮಾರ್‌, ಜೆ.ಎನ್‌. ಕಾಳಿದಾಸ್‌, ಸಣ್ಣಕ್ಕಿ ರುದ್ರಪ್ಪ, ಕೆ. ಸುರೇಶ್‌, ವಿಶ್ವನಾಥ್‌, ಕೆ. ಹನುಮಂತ, ನಾಗರತ್ನಮ್ಮ, ಅಂಜಿನಪ್ಪ, ಲಿಂಗಪ್ಪ, ಸತೀಶ, ನಜೀರ್‌ ಸಾಬ್‌ ಮೂಲಿಮನಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.