ADVERTISEMENT

ತುಂಗಭದ್ರಾ ಅಣೆಕಟ್ಟೆ: ವಾಸ್ತವ ತಿಳಿಸಿ

ರೈತ ಮುಖಂಡರಿಂದ ಮಂಡಳಿ ಕಾರ್ಯದರ್ಶಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:23 IST
Last Updated 28 ಜನವರಿ 2026, 7:23 IST
ಹೊಸಪೇಟೆಯ ತುಂಗಭದ್ರಾ ಮಂಡಳಿ ಕಚೇರಿಗೆ ಮಂಗಳವಾರ ತೆರಳಿದ ರೈತ ಮುಖಂಡರು, ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯ ತುಂಗಭದ್ರಾ ಮಂಡಳಿ ಕಚೇರಿಗೆ ಮಂಗಳವಾರ ತೆರಳಿದ ರೈತ ಮುಖಂಡರು, ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸುವ ಕಾಮಗಾರಿ ಇದೀಗ ನಡೆಯುತ್ತಿದ್ದರೂ, ಅನುದಾನ ವಿಚಾರದಲ್ಲಿ ಗೊಂದಲ ನೆಲೆಸಿದೆ, ತಕ್ಷಣ ವಾಸ್ತವ ಸ್ಥಿತಿಯನ್ನು ತಿಳಿಸಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಕರೂರು ಅವರ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ತುಂಗಭದ್ರಾ ಮಂಡಳಿ ಕಚೇರಿಗೆ ಬಂದು ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ರೈತರು ಎರಡನೇ ಬೆಳೆಯನ್ನು ತ್ಯಾಗ ಮಾಡಿದ್ದಾರೆ. ಕಾಲಮಿತಿಯೊಳಗೆ ಕ್ರೆಸ್ಟ್‌ಗೇಟ್ ನಿರ್ಮಿಸುವ ಭರವಸೆಯನ್ನು ನೀಡಲಾಗಿದೆ. ಆದರೆ ಕರ್ನಾಟಕ ಸರ್ಕಾರ ₹10 ಕೋಟಿ ಕೊಟ್ಟಿದ್ದನ್ನು ವಾಪಸ್ ಪಡೆದಿದೆ ಎಂದು ಗೇಟ್‌ ತಜ್ಞ ಕನ್ಹಯ್ಯ ನಾಯ್ಡು ತಿಳಿಸಿದ್ದಾರೆ. ಹೀಗಾಗಿ ರೈತರಲ್ಲಿ ಭಾರಿ ಗೊಂದಲ ಮೂಡಿದೆ, ಇದನ್ನು ತಕ್ಷಣ ಬಗೆಹರಿಸಬೇಕು ಎಂದು ಮಾಧವ ರೆಡ್ಡಿ ಒತ್ತಾಯಿಸಿದರು.

ADVERTISEMENT

‘ಆಂಧ್ರ ಮತ್ತು ಕರ್ನಾಟಕದ ಪಾಲಿನ ದುಡ್ಡು ತುಂಗಭದ್ತಾ ಮಂಡಳಿಯ ಖಾತೆಯಲ್ಲಿ ಜಮೆ ಆಗಿದೆಯೇ? ಹೊಸ ಚೈನ್‌ಲಿಂಕ್ ಅಳವಡಿಕೆ ಆಗುವುದು ನಿಜವೇ? ಸದ್ಯ ಎಷ್ಟು ಗೇಟ್ ಅಳವಡಿಕೆ ಆಗಿದೆ ಎಂಬುದರ ಮಾಹಿತಿ ನೀಡಲು ಕೇಳಿಕೊಂಡೆವು. ಫೆಬ್ರುವರಿ ಒಳಗೆ 17 ಗೇಟ್ ಹಾಗೂ ಏಪ್ರಿಲ್‌ಗೆ ಮೊದಲು ಇತರ ಎಲ್ಲಾ ಗೇಟ್ ಅಳವಡಿಸುತ್ತೇವೆ, ಸದ್ಯ ದುಡ್ಡಿನ ಕೊರತೆ ಇಲ್ಲ ಎಂಬ ಮಾಹಿತಿಯನ್ನು ಕಾರ್ಯದರ್ಶಿ ಅವರು ನೀಡಿದರು’ ಎಂದು ಮಾಧವ ರೆಡ್ಡಿ ಬಳಿಕ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯೋಗದಲ್ಲಿ ರೈತ ಮುಖಂಡರಾದ ವಿಶ್ವನಾಥ, ನಾಗರಾಜ, ವೆಂಕಟ್‌, ಓಂಕಾರಿ, ಬಸುರೆಡ್ಡಿ, ಗಣೇಶ್ ಸ್ವಾಮಿ ಇದ್ದರು.

ಆತಂಕ ಬೇಡ ನಂಬಿಕೆ ಇಡಿ

‘ರೈತರಿಗೆ ಈಗಾಗಲೇ ಕೊಟ್ಟ ಮಾತಿನಂತೆ ಜೂನ್ ಮೊದಲಿಗೆ ಗೇಟ್ ಅಳವಡಿಕೆ ಪೂರ್ಣಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ. ಹೊಸ ಚೈನ್‌ಲಿಂಕ್ ಟೆಂಡರ್ ವಿಳಂಬವಾಗಲು ಸೂಕ್ತ ಗುಣಮಟ್ಟದ ಉಕ್ಕು ಲಭಿಸದೆ ಇದ್ದುದು ಕಾರಣವಾಗಿತ್ತು. ಹಳೆಯ ಚೈನ್‌ಲಿಂಕ್‌ ಸದೃಢವಾಗಿದ್ದು ಅದನ್ನು ಬಳಸಬಹುದು ಹೊಸತು ಸಿದ್ಧವಾದರೆ ಅದನ್ನೂ ಬಳಸಬಹುದು ಎಂಬ ಚಿಂತನೆಯಲ್ಲಿ ತುಂಗಭದ್ರಾ ಮಂಡಳಿ ಇರುವುದು ಗಮನಕ್ಕೆ ಬಂತು’ ಎಂದು ಮಾಧವ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.