ADVERTISEMENT

ಹೊಸಪೇಟೆ: ಸಕ್ಕರೆ ಕಾರ್ಖಾನೆ ಸ್ಥಾಪನೆ; ಸ್ಪಂದಿಸದಿದ್ದರೆ ಜಿಲ್ಲೆ ಬಂದ್‌ ಎಚ್ಚರಿಕೆ

ಸಿ.ಎ.ಗಾಳೆಪ್ಪ ನೇತೃತ್ವ– ಸಕ್ಕರೆ ಕಾರ್ಖಾನೆಗಾಗಿ ರೈತರಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:18 IST
Last Updated 21 ಏಪ್ರಿಲ್ 2025, 14:18 IST
ಹೊಸಪೇಟೆ ಸಮೀಪ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಆಗ್ರಹಿಸಿ ಸೋಮವಾರ ನೂರಾರು ರೈತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಹೊಸಪೇಟೆ ಸಮೀಪ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಆಗ್ರಹಿಸಿ ಸೋಮವಾರ ನೂರಾರು ರೈತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಹೊಸಪೇಟೆ (ವಿಜಯನಗರ): ಹೊಸಪೇಟೆ ಸಮೀಪ ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು, ಈ ನಿಟ್ಟಿನಲ್ಲಿ 15 ದಿನದೊಳಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲಾ ಬಂದ್‌ನಂತಹ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಇಲ್ಲಿ ನಡೆದ ರೈತರ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಬಂದು ಎರಡು ವರ್ಷವಾದರೂ ಈ ಭಾಗಕ್ಕೆ ಅತ್ಯಗತ್ಯವಾದ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ರೈತರಿಗೆ ಮಾಡಿದ ಮಹಾ ಮೋಸವಾಗಿದೆ. ಸ್ಥಳೀಯ ಶಾಸಕರು ಸಹ ಇದಕ್ಕೆ ನೇರ ಹೊಣೆಗಾರರು. ಸರ್ಕಾರ ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡು 15 ದಿನದೊಳಗೆ ಸ್ಪಂದಿಸಬೇಕು’ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ‘ಈಗಾಗಲೇ ತಾಲ್ಲೂಕುಗಳಲ್ಲಿ ಸಾವಿರಾರು ರೈತರು ಈ ಸಂಘಟನೆಯ ಸದಸ್ಯರಾಗಿದ್ದಾರೆ. ಮೊದಲಿಗೆ ಪ್ರತಿ ತಾಲ್ಲೂಕಿಗೆ ತೆರಳಿ ಬಂದ್ ಕುರಿತಂತೆ ಮನವರಿಕೆ ಮಾಡಿ, ಬಳಿಕ ಜಿಲ್ಲಾ ಬಂದ್‌ಗೆ ಕರೆ ಕೊಡಲಾಗುವುದು, ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಅವರಿಂದ ಶೀಘ್ರ ಉತ್ತರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದರು.

ADVERTISEMENT

ಬಿರು ಬಿಸಿಲನ್ನೂ ಲೆಕ್ಕಿಸದೆ ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ನೂರಾರು ರೈತರು ಸಕ್ಕರೆ ಕಾರ್ಖಾನೆಗಾಗಿ ಘೋಷಣೆ ಕೂಗಿದರು. ವಡಕರಾಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನೀತ್‌ ರಾಜ್‌ಕುಮಾರ್ ವೃತ್ತಕ್ಕೆ ಬಂತು. ಬಳಿಕ ತಹಶೀಲ್ದಾರ್ ಕಚೇರಿ ಮುಂಭಾಗ ರಸ್ತೆಯಲ್ಲೇ ಪ್ರತಿಭಟನ ಸಭೆ ನಡೆಸಲಾಯಿತು. ಕೊನೆಗೆ ತಹಶೀಲ್ದಾರ್ ಶ್ರುತಿ ಎಂ.ಎಂ.ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಬೇರ, ಕಾರ್ಯದರ್ಶಿ ವೆಂಕಟೇಶ್‌, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಮಂಜು, ಕೊಟ್ಟೂರಿನ ರೇಖಾ, ಹರಪನಹಳ್ಳಿಯ ರತ್ನಮ್ಮ, ಹಡಗಲಿಯ ಕಲಾವತಿ, ಹಗರಿಬೊಮ್ಮನಹಳ್ಳಿಯ ರಮೇಶ್‌, ಕಮಲಾಪುರದ ಬಸವರಾಜ, ಹೊಸಪೇಟೆ ತಾಲ್ಲೂಕು ಕಾರ್ಯದರ್ಶಿ ಯಲ್ಲಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.