ADVERTISEMENT

‘ಪ್ರಧಾನಿಗೆ ಕಪ್ಪುಚುಕ್ಕೆ ತರಲು ರೈತ ಹೋರಾಟ’

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:58 IST
Last Updated 6 ಏಪ್ರಿಲ್ 2021, 15:58 IST
ಹೊಸಪೇಟೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಐನಾಥ ರೆಡ್ಡಿ ಮಾತನಾಡಿದರು
ಹೊಸಪೇಟೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಐನಾಥ ರೆಡ್ಡಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ವಿರೋಧ ಪಕ್ಷದವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಕಪ್ಪುಚುಕ್ಕೆ ತರುವ ದುರುದ್ದೇಶದಿಂದ ಕೃಷಿ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವವರು ರೈತರಲ್ಲ’ ಎಂದು ಬಿಜೆಪಿ ರೈತ ಮೋರ್ಚಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಐನಾಥ ರೆಡ್ಡಿ ಆರೋಪಿಸಿದರು.

ಬಿಜೆಪಿ ಮಂಡಲದಿಂದ ಮಂಗಳವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಿಸಾನ್ ಸಮ್ಮಾನ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಪಂಜಾಬ್, ದೆಹಲಿ, ಹರಿಯಾಣ ಬಿಟ್ಟರೆ ಯಾವ ರಾಜ್ಯದಲ್ಲೂ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿಲ್ಲ. ವಿರೋಧ ಪಕ್ಷದವರು ಮಸೂದೆಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ, ಒಂದು ದಿನ ಹೊರ ಬರಬೇಕಾದರೆ ಮನೆಗೆ, ಹೊಲಕ್ಕೆ, ಜಾನುವಾರುಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಆದರೆ, ಮೂರು ತಿಂಗಳಾದರೂ ಕೃಷಿ ಕೆಲಸವನ್ನು ಮಾಡದೇ ಹೋರಾಟ ಮಾಡುತ್ತಿದ್ದಾರೆ. ಅಂದರೆ ಅವರು ರೈತರಲ್ಲ’ ಎಂದರು.

ADVERTISEMENT

‘ಕೃಷಿ ಸೆಸ್ ರೈತರಿಗೆ ದೊಡ್ಡ ಕೊಡುಗೆಯಾಗಿದೆ. ಹಳೆಯ ಮತ್ತು ಹೊಸ ಎಪಿಎಂಸಿ ವ್ಯವಸ್ಥೆ ಎರಡೂ ಇವೆ. ರೈತರು ಯಾವುದಾದರೂ ಅನುಸರಿಸಬಹುದು’ ಎಂದು ಹೇಳಿದರು.

ಒಬಿಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮಂಡಲ ಉಸ್ತುವಾರಿ ಪೂಜಪ್ಪ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ವಿ.ಬಸವರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ, ಪ್ರಕಾಶ ಬಾಬು, ಶಶಿಧರ ಗೌಡ, ಶಂಕರ್ ಮೇಟಿ, ಜೀವರತ್ನಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.