ADVERTISEMENT

ಹರಪನಹಳ್ಳಿ: ರೋಹಿಣಿ ನಿರೀಕ್ಷೆಯಲ್ಲಿ ರೈತಾಪಿ ವರ್ಗ

ಹರಪನಹಳ್ಳಿ: ಮೇ ಅಂತ್ಯಕ್ಕೆ ವಾಡಿಕೆಗಿಂತ ಕಡಿಮೆ ಸುರಿದ ಮಳೆ

ವಿಶ್ವನಾಥ ಡಿ.
Published 30 ಮೇ 2023, 1:39 IST
Last Updated 30 ಮೇ 2023, 1:39 IST
ಹರಪನಹಳ್ಳಿ ತಾಲ್ಲೂಕಿನ ಜಮೀನೊಂದರಲ್ಲಿ ಬಿರುಬಿಸಿಲಿನಲ್ಲಿ ಹೊಲ ಹಸನು ಮಾಡುತ್ತಿರುವ ರೈತ
ಹರಪನಹಳ್ಳಿ ತಾಲ್ಲೂಕಿನ ಜಮೀನೊಂದರಲ್ಲಿ ಬಿರುಬಿಸಿಲಿನಲ್ಲಿ ಹೊಲ ಹಸನು ಮಾಡುತ್ತಿರುವ ರೈತ   

ಹರಪನಹಳ್ಳಿ: ಬಿಸಿಲಿನ ಝಳದ ನಡುವೆಯೂ ಹೊಲ ಹಸನು ಮಾಡಿ ಮಳೆಗಾಗಿ ಕಾಯುತ್ತಿರುವ ರೈತರ ಮೊಗದಲ್ಲಿ ಇನ್ನೂ ಮಂದಹಾಸ ಮೂಡಿಲ್ಲ. ವಾಡಿಕೆಗಿಂತ ಕಡಿಮೆ ಮಳೆ ಸುರಿದ ಕಾರಣ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.

ಅಶ್ವಿನಿ ಮಳೆಯು ವಾಡಿಕೆಯಂತೆ 46.10 ಮಿ.ಮೀ. ಸುರಿಯಬೇಕಿತ್ತು. ಆದರೆ ಈ ವರ್ಷ ಏಪ್ರಿಲ್‌ 14 ರಿಂದ ಏ.28ರ ವರೆಗೆ ಕೇವಲ 12 ಮಿ.ಮೀ. ಮಳೆ ಸುರಿದಿದೆ. ಭರಣಿ ಮಳೆ ಕಳೆದ ವರ್ಷ 150.70ಮಿ.ಮೀ. ಸುರಿದಿತ್ತು. ಪ್ರಸಕ್ತ ವರ್ಷ ಏ.28 ರಿಂದ ಮೇ 25ಕ್ಕೆ 52.57 ಮಿ.ಮೀ.ರಷ್ಟು ಮಾತ್ರ ಸುರಿದಿದ್ದು ರೈತರ ಮುಖದಲ್ಲಿ ಕಳೆ ಇಲ್ಲದಂತಾಗಿದೆ. ಹೊಲ ಹಸನು ಮಾಡಿಕೊಂಡಿರುವ ರೈತಾಪಿ ಕುಟುಂಬಗಳು ಬಿತ್ತನೆಗಾಗಿ ರೋಹಿಣಿ ಮಳೆಗಾಗಿ ಕಾಯುತ್ತಿದ್ದಾರೆ. ಈಗ ಮಳೆ ಸುರಿದರೆ ಭೂಮಿ ಹದಗೊಂಡು ಬಿತ್ತನೆ ಆರಂಭಕ್ಕೆ ಕನಿಷ್ಠ ಹದಿನೈದು ದಿನ ಬೇಕಾಗುತ್ತದೆ.

ರೋಹಿಣಿ ಆಗಮನದ ನಿರೀಕ್ಷೆಯಲ್ಲಿ ಹೆಸರು, ಹಲಸಂದಿ ಬಿತ್ತನೆ ಬೀಜ ಖರೀದಿಸಿಟ್ಟುಕೊಂಡಿದ್ದಾರೆ. 2022ರಲ್ಲಿ ಭರಣಿ, ಕೃತ್ತಿಕ, ರೋಹಿಣಿ, ಮೃಗಶಿರ, ಆರಿದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಉತ್ತರಿ ಮಳೆಗಳು ವಾಡಿಕೆಯ ಪ್ರಕಾರ ಸುರಿದು ಬಿತ್ತಿದ್ದ ಬೆಳೆಗಳಿಂದ ಉತ್ತಮ ಇಳುವರಿ ಬಂದಿತ್ತು. ಆದರೆ 2023ರ ಮೇ ತಿಂಗಳಾಂತ್ಯಕ್ಕೆ ವಾಡಿಕೆಯಂತೆ ನಿರೀಕ್ಷಿತ ಮಳೆ ಸುರಿದಿಲ್ಲ ಎನ್ನುತ್ತಾರೆ ಪ್ರಗತಿಪರ ರೈತ ಮಲ್ಲಪ್ಪ.

ADVERTISEMENT

‘ಮೋಡಗಳು ಮಳೆಯ ಮುನ್ಸೂಚನೆ ನೀಡುತ್ತವೆ. ಆದರೆ ಹನಿಗಳು ಮಾತ್ರ ಭೂಮಿಗಿಳಿಯುತ್ತಿಲ್ಲ. ಜೂನ್‌ ಎರಡನೇ ವಾರದೊಳಗೆ ವಾಡಿಕೆಗಿಂತ ಅರ್ಧದಷ್ಟು ಮಳೆ ಸುರಿದರೆ ಸಾಕು ರೈತರ ಬಿತ್ತನೆ ಚುರುಕು ಪಡೆಯುತ್ತದೆ. ಮಳೆ ನಿರೀಕ್ಷೆಯಲ್ಲಿರುವ ಇಲಾಖೆ ಮೆಕ್ಕೆಜೋಳ -70,050 ಹೆಕ್ಟೇರ್, ಭತ್ತ 3,343 ಹೆಕ್ಟೇರ್, ಊಟದ ಜೋಳ 1,150 ಹೆಕ್ಟೇರ್, ರಾಗಿ 4,620ಹೆಕ್ಟೇರ್, ತೊಗರಿ 3,254 ಹೆಕ್ಟೇರ್, ನೆಲಗಡಲೆ 2,500 ಹೆಕ್ಟೇರ್, ಸೂರ್ಯಕಾಂತಿ 500 ಹೆಕ್ಟೇರ್, ಹತ್ತಿ 1,000 ಹೆಕ್ಟೇರ್, ಕಬ್ಬು 1,200 ಹೆಕ್ಟೇರ್ ಸೇರಿ ಒಟ್ಟು 88,235 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ.

ಹರಪನಹಳ್ಳಿ ತಾಲ್ಲೂಕಿನ ಜಮೀನೊಂದರಲ್ಲಿ ಬಿರುಬಿಸಿಲಿನಲ್ಲಿ ಹೊಲ ಹಸನು ಮಾಡುತ್ತಿರುವ ರೈತ

Cut-off box - 30000 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ‘ಭತ್ತ 1600 ಕ್ವಿಂಟಲ್ ಊಟದ ಜೋಳ 86 ಕ್ವಿಂಟಲ್ ರಾಗಿ 400 ಕ್ವಿಂಟಲ್‌ ಮೆಕ್ಕೆಜೋಳ 25000 ಕ್ಷಿಂಟಲ್‌ ತೊಗರಿ 550 ಕ್ವಿಂಟಲ್‌ ನೆಲಗಡಲೆ 2500 ಕ್ವಿಂಟಲ್ ಸೇರಿದಂತೆ ಒಟ್ಟು 30000 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಾದ ಚಿಗಟೇರಿ ತೆಲಿಗಿ ಕಸಾಬ ಅರಸೀಕೆರ ಹಾಗೂ ಹೆಚ್ಚುವರಿ ಕೇಂದ್ರಗಳಾದ ಸಾಸ್ವಿಹಳ್ಳಿ ಹಲುವಾಗಲು ಒಟ್ಟು ಆರು ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ. ಬೀಜ ಮಾರಾಟದಲ್ಲಿ ರೈತರಿಗೆ ಆಗುತ್ತಿದ್ದ ವಂಚನೆ ತಪ್ಪಿಸಲು ಈ ಬಾರಿ ಎಲ್ಲ ಕೇಂದ್ರಗಳಲ್ಲಿ ಬಾರ್ ಕೋಡ್ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತಂದಿದೆ. ಬಾರ್ ಕೋಡ್ ಮೂಲಕವೇ ರೈತರು ಬೀಜ ಖರೀದಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಗೊಂದಿ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.