ADVERTISEMENT

ರಕ್ತದ ನೆಲದಲ್ಲಿ ಹೂ ಅರಳದು: ವ್ಯವಸ್ಥೆ, ಶೋಷಣೆಗಳ ವಿರುದ್ಧ ಘರ್ಜಿಸಿದ ಯುವ ಕವಿಗಳು

ಸಿ.ಶಿವಾನಂದ
Published 16 ಫೆಬ್ರುವರಿ 2026, 2:08 IST
Last Updated 16 ಫೆಬ್ರುವರಿ 2026, 2:08 IST
ಹಂಪಿಯ ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ಭಾನುವಾರ ನಡೆದ ಯುವ ಕವಿಗೋಷ್ಠಿಯನ್ನು ಸಾಹಿತಿ ಎ.ಎಂ.ಮದರಿ ಉದ್ಘಾಟಿಸಿದರು, ಪ್ರೊ.ಕೆ.ರವೀಂದ್ರನಾಥ, ಚನ್ನಬಸಪ್ಪ ಚಿಲಕರಾಗಿ ಹಾಜರಿದ್ದರು  –ಪ್ರಜಾವಾಣಿ ಚಿತ್ರ
ಹಂಪಿಯ ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ಭಾನುವಾರ ನಡೆದ ಯುವ ಕವಿಗೋಷ್ಠಿಯನ್ನು ಸಾಹಿತಿ ಎ.ಎಂ.ಮದರಿ ಉದ್ಘಾಟಿಸಿದರು, ಪ್ರೊ.ಕೆ.ರವೀಂದ್ರನಾಥ, ಚನ್ನಬಸಪ್ಪ ಚಿಲಕರಾಗಿ ಹಾಜರಿದ್ದರು  –ಪ್ರಜಾವಾಣಿ ಚಿತ್ರ   

ಹಂಪಿ (ವಿಜಯನಗರ): ‘ವ್ಯವಸ್ಥೆಯನ್ನು ಅಣಕಿಸಿದ, ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿದ, ಅಸಮಾನತೆಯನ್ನು ತೊಡೆದು ಹಾಕುವ, ಸಮ ಸಮಾಜ ಕುರಿತು ಜಾಗೃತಿಯನ್ನು ಹುಟ್ಟುಹಾಕಿದ, ಮಹಿಳಾ ಪರ ಧೋರಣೆಗಳ ಸಾಲುಗಳು ಹಂಪಿ ಉತ್ಸವ ನಿಮಿತ್ತ ಭಾನುವಾರ ಇಲ್ಲಿ ನಡೆದ ಯುವ ಕವಿಗೋಷ್ಠಿಯಲ್ಲಿ ದಾಖಲಾದವು.

‘ರಕ್ತದಿಂದ ತೊಯ್ದ ನೆಲದಲ್ಲಿ ಹೂಗಳು ಅರಳುವುದಿಲ್ಲ, ಹೂಗಳು ಅರಳದ ಊರಿಗೆ ಚಿಟ್ಟೆಗಳು ಹಕ್ಕಿಗಳು ದುಂಬಿಗಳು ಬರುವುದಿಲ್ಲ’ ‘ಅಂಗಳದ ಮಣ್ಣಿನಲ್ಲಿ ಮದ್ದು-ಗುಂಡು-ಬಾಂಬ್‍ಗಳ ರಕ್ತಸಿಕ್ತ ರಂಗೋಲಿ’ ಎಂದು ಯುವಕವಿ ಅಭಿಷೇಕ್ ಬಳೆಮಸರಕಲ್ ಅವರು ‘ಕೋವಿ ಕೊಳಲಾಗಲಿ’ ಶೀರ್ಷಿಕೆಯ ಕಾವ್ಯ ವಾಚಿಸುತ್ತಿದ್ದಂತೆಯೇ ಹಾಜರಿದ್ದ ಕವಿಹೃದಯಗಳಿಂದ ಚಪ್ಪಾಳೆಯ ಕರತಾಡನ ಬಂತು.

ಯುದ್ಧಗಳೆಂಬ ಉನ್ಮಾದವನ್ನು ಜರಿದ ಈ ಕವಿ, ಭೀಮ ಸಮತೆಯ ಹಣತೆ ಹಚ್ಚಲಿ ಎಂದು ಕಾವ್ಯದ ಮೂಲಕ ಕಟ್ಟಿಕೊಟ್ಟರು.

ADVERTISEMENT

ಹುಬ್ಬಳ್ಳಿಯ ಕವಯಿತ್ರಿ ಅನಸೂಯ ವೈ.ಟಿ. ಅವರು ‘ಅಗೋ ನೋಡಿದೆಯಾ ನೀನಲ್ಲಿ ವಯ್ಯಾರದ ಮೈಮಾಟ’ ಎನ್ನುತ್ತಾ ಸ್ತ್ರೀಶೋಷಣೆ, ಮಹಿಳೆಯನ್ನು ಭೋಗದ ವಸ್ತುವಿನಂತೆ ಕಾಣುವ ಅಸಂತೃಪ್ತ ಮನಸ್ಸುಗಳಿಗೆ ಅಕ್ಷರಗಳ ಮೂಲಕ ಛಡಿ ಏಟು ನೀಡಿದರು.

ರೇಷ್ಮಾ ಕಂದಕೂರ ಅವರು ‘ಆ ದಿನಗಳ ಬರುವಿಕೆಗೆ ಕಣ್ಣು ಮಿಟುಕಿಸದೇ ಒಂದೇ ಒಂದು ದನಿಗಾಗಿ ಒಲವಿನ ಕಂಪನಕೆ’ ಕಾಯುತ್ತಿದ್ದೇನೆ ಎನ್ನುವ ಮೂಲಕ ಆತ್ಮಬಂಧುಗಳನ್ನು ಸ್ವಾಗತಿಸಿದಂತಿತ್ತು. ಆರ್.ಪಿ.ಮಂಜುನಾಥ ಅವರು ‘ಮಗಳೆಂದರೆ ಅವಳು ಸದಾ ಪ್ರೀತಿ ತೋರುವ ನನ್ನಮ್ಮನಂತೆ’ ಎಂದು ಅಪ್ಪ ಮಗಳ ಮೇಲಿನ ಕಕ್ಕುಲಾತಿಯನ್ನು ಬಿಡಿಸಿಟ್ಟರು. ಈ ಕವಿತೆಗಳು ಹಂಪಿ ಉತ್ಸವದ ಗಾಂಭೀರ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿಬಿಟ್ಟವು.

ಎಂ. ಕಾರ್ತಿಕ್ ಮರಿಸ್ವಾಮಿ ಮಠ, ಕೆ.ಶಾಂತರಾಜ್, ಲಕ್ಷ್ಮಣ್ ವಿಟ್ರವಟ್ಟಿ, ರೇಣುಕಾ ಹೆಳವರ್ ಶರೀಫ್ ಹಸ್ನಕಲ್, ಕೀರ್ತಿ ಅಕ್ಕಿ, ತುಳಜಿ ಕೂಡ್ಲಿಗಿ, ಯಡಿಯೂರ್ ಪಲ್ಲವಿ, ಶೇಖ್ ಮಹಮ್ಮದ್, ವೈಷ್ಣವಿ ನಾಣ್ಯಾಪುರ, ಜೆ.ಭೀಮೇಶ್ ಕೊಟ್ಟೂರು, ಎಂ.ಆರ್.ರೂಪ, ವಿ.ನಾಗರಾಜ, ಸೇರಿದಂತೆ 35 ಯುವ ಕವಿಗಳು ಕಾವ್ಯ ವಾಚನದ ಮೂಲಕ ಗಮನ ಸೆಳೆದರು.

ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಚನ್ನಬಸಪ್ಪ ಚಿಲಕರಾಗಿ ಆಶಯ ನುಡಿಗಳನ್ನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೇಗೌಡ, ನಾಗರರಾಜ್ ಹವಾಲ್ದಾರ್, ದಯಾನಂದ ಕಿನ್ನಾಳ ಇದ್ದರು.

‘ಸಾಮಾಜಿಕ ಮೌಲ್ಯ ಮುಖ್ಯ’

ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ಎ.ಎಂ.ಮದರಿ ಸಾಹಿತ್ಯಕ್ಕಿಂತ ಸಾಮಾಜಿಕ ಮೌಲ್ಯ ಮುಖ್ಯವಾಗಿದೆ ಕೂಲಿಕಾರರ ಸಮಸ್ಯೆಗಳ ಕುರಿತು ಯುವ ಕವಿಗಳು ಅರ್ಥಮಾಡಿಕೊಳ್ಳಬೇಕು. ನವೋದಯ ಕವಿಗಳು ವಚನ ಸಾಹಿತ್ಯ ತತ್ವಪದಗಳ ಕುರಿತು ಚಿಂತಿಸುವ ಜರೂರು ಇದೆ ಮಹಲುಗಳಿಗಿಂತ ಗುಡಿಸಲಿನ ಬದುಕಿನ ಕುರಿತು ಬರೆಯಬೇಕು ಎಂದರು. ‘ಕಾವ್ಯಗಳು ಭಾವನಾತ್ಮಕವಾಗಿ ಸಂತೋಷ ಕೊಡುತ್ತವೆ ವಿನಾ ಪ್ರಾಯೋಗಿಕವಾಗಿ ಅಲ್ಲ‘ ಎಂದು ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.