
ಮರಿಯಮ್ಮನಹಳ್ಳಿ: ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಶಾಲೆ ಆವರಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ನಾಣಿಕೇರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನೋಡುಗರ ಮನಸೆಳೆಯಿತು.
ಸಂಜೆ 4 ಗಂಟೆಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಸಾಗಿತು.
ರಾಮಸಾಗರದ ತಂಡದ ಕಹಳೆ ನಾದದಿಂದ ಆರಂಭವಾದ ಮೆರವಣಿಗೆಯಲ್ಲಿ ರಾಮವ್ವ ಜೋಗತಿ ಹಾಗೂ ಅಂಜಿನಮ್ಮ ಜೋಗತಿ ತಂಡದ ಜೋಗತಿ ಕಲಾವಿದೆಯರು ದೇವಿಯ ಕೊಡ ಹೊತ್ತು ಪ್ರದರ್ಶಿಸಿದ ಜೋಗತಿ ನೃತ್ಯ ಹಾಗೂ ಪದಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.
ತಂಬ್ರಳ್ಳಿಯ ಕಲಾವಿದರು ನಂದಿಧ್ವಜ ಕೋಲು ಹಾಗೂ ಸಮಾಳ ನುಡಿಸುತ್ತ ಸಾಗಿದರೆ, ಹೊಸಪೇಟೆಯ ಕಲಾವಿದರು ಕೀಲುಗೊಂಬೆ ಕುಣಿತ, ಮಲಪನಗುಡಿಯ ಕಲಾವಿದರ ಡೊಳ್ಳು ಹಾಗೂ ಮೆಟ್ರಿ ದೇವಲಾಪುರದ ತಂಡದವರ ಕರಡಿ ಮಜಲು ನೋಡುಗರ ಗಮನ ಸೆಳೆಯಿತು.
ರಾಮಾಂಜಿನೇಯ ತಂಡ ಕಲಾವಿದರ ಹಲಗೆಯ ನಾದಕ್ಕೆ ಯುವಕರು ಹೆಜ್ಜೆ ಹಾಕುತ್ತ ಸಾಗಿದರೆ, ತಿಮ್ಮಲಾಪುರ ಹಾಗೂ ಮಲಪನಗುಡಿಯ ಯುವಕರು ಕೋಲಾಟ, ಕಂಪ್ಲಿ ಕಲಾವಿದರ ತಾಷ ರಾಂಡೋಲು, ರಾಮಸಾಗರದ ಕಲಾವಿದರ ಬ್ಯಾಂಡ್ ಮೆರವಣಿಗೆ ಕಳೆ ಹೆಚ್ಚಿಸಿತ್ತು.
ಮೆರವಣಿಗೆಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಸಿ.ಸತೀಶ್, ಗೋವಿಂದರ ಪರಶುರಾಮ, ಪ್ರಕಾಶ್ ಪೂಜಾರ್, ಎಸ್.ಕೃಷ್ಣಾನಾಯ್ಕ, ಬಿ.ವಿಜಯಕುಮಾರ್, ನಾಣಿಕೇರಿ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ರೆಹಮಾನ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯವೃತ್ತ ಬಳಸಿಕೊಂಡು ಹರಿಹರ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಶಾಲಾ ಆವರಣದಲ್ಲಿನ ವೇದಿಕೆಯವರೆಗೆ ಸಾಗಿ ಕೊನೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.