ADVERTISEMENT

ನನ್ನ ಬಲಿ ಪಶು ಮಾಡಿದವರೇ, ಯತ್ನಾಳರನ್ನು ಬಳಸಿಕೊಳ್ಳುತ್ತಿದ್ದಾರೆ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 16:01 IST
Last Updated 11 ಮಾರ್ಚ್ 2025, 16:01 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ಹೊಸಪೇಟೆ (ವಿಜಯನಗರ): ‘ಯಡಿಯೂರಪ್ಪ ವಿರುದ್ಧ ನನ್ನನ್ನು ಎತ್ತಿಕಟ್ಟಿ ಬಲಿ ಪಶು ಮಾಡಿದವರೇ, ಈಗ ಬಸನಗೌಡ ಪಾಟೀಲ ಯತ್ನಾಳ ಅವರನ್ನೂ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ ಅವರನ್ನು ಎತ್ತಿಕಟ್ಟಲಾಗುತ್ತಿದೆ.  ಆದರೆ, ಯತ್ನಾಳ ಅವರೂ ವೀರಶೈವ ಸಮಾಜದ ನಾಯಕರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಯತ್ನಾಳ ಅವರನ್ನು ಕೆಲವರು ಯಡಿಯೂರಪ್ಪ ವಿರುದ್ಧ ಮಾತನಾಡಲು ಎತ್ತಿ ಕಟ್ಟಿದ್ದಾರೆ. ಅವರನ್ನು ಚೂರಿಯಂತೆ ಬಳಸುತ್ತಿದ್ದಾರೆ. ಹಿಂದೆ ನನ್ನನ್ನೂ ಸಹ ಇದೇ ರೀತಿ ಬಳಸಿಕೊಂಡಿದ್ದರು, ಬಳಿಕ ನನಗೆ ಜ್ಞಾನೋದಯವಾಯಿತು. ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡುವವರು ಮುಖ್ಯಮಂತ್ರಿಯೂ ಆಗಲ್ಲ, ಪಕ್ಷದ ಅಧ್ಯಕ್ಷರೂ ಆಗಲ್ಲ’ ಎಂದರು.

ADVERTISEMENT

‘ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಗಲಾಟೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಗಳದಲ್ಲೂ ಬಗೆಹರಿದಿಲ್ಲ. ಇಬ್ಬರೂ ಒಂದಾಗಿ ಹೋಗಿ ಎಂದು ಹೈಕಮಾಂಡ್ ಸೂಚನೆ ನೀಡಿದರೂ, ತಿಕ್ಕಾಟ ಮುಗಿದಿಲ್ಲ. ಬಜೆಟ್ ಅಧಿವೇಶನದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.