ಹೊಸಪೇಟೆ (ವಿಜಯನಗರ): ‘ಕೋವಿಡ್ ನಿರ್ವಹಣೆ ಮಾಡುವುದು ಸರ್ಕಾರದಿಂದಷ್ಟೇ ಸಾಧ್ಯವಿಲ್ಲ. ಇದಕ್ಕೆ ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದೆ. ಎಲ್ಲರೂ ಕೈಜೋಡಿಸಿದರಷ್ಟೇ ಈ ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡಬಹುದು’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.
ರೋಟರಿ ಕ್ಲಬ್‌ನಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಆಶಾ, ಆರೋಗ್ಯ ಕಾರ್ಯಕರ್ತೆಯರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ರೋಟರಿ ಕ್ಲಬ್‌ನವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತದ ಬೆನ್ನಿಗೆ ನಿಂತಿದ್ದಾರೆ. ಸರ್ಕಾರದ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕೊರೊನಾ ಸೇನಾನಿಗಳಿಗೆ ಅಗತ್ಯ ನೆರವು ನೀಡಿದ್ದಾರೆ. ಅಗತ್ಯ ಇರುವವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಕೆಲಸ ಇಲ್ಲಿಗೆ ಮುಗಿದಿಲ್ಲ. ಇನ್ನೂ ಕ್ರಮಿಸಬೇಕಾದ ಮಾರ್ಗ ಬಹಳಷ್ಟಿದೆ. ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಕೊರೊನಾ ಮಣಿಸಲು ಶ್ರಮಿಸೋಣ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆದುಕೊಳ್ಳಬೇಕು. ಆಶಾ, ಆರೋಗ್ಯ ಕಾರ್ಯಕರ್ತೆಯರ ಸೇವೆ ಅನನ್ಯವಾದುದು’ ಎಂದು ಹೇಳಿದರು.
ಇದೇ ವೇಳೆ ಐವರು ಎಚ್‌ಐವಿ ಪೀಡಿತ ಮಹಿಳೆಯರಿಗೆ ಹೋಲಿಗೆ ಯಂತ್ರಗಳನ್ನು ವಿತರಿಸಲಾಯಿತು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಸಜ್ಜನ್ ಖಯಾಲ್, ರಾಘವೇಂದ್ರ, ಸತ್ಯನಾರಾಯಣ, ಕುಮಾರಸ್ವಾಮಿ ಶೆಟ್ಟಿ, ಮಂಜುನಾಥ ಪತ್ತಿಕೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.