ADVERTISEMENT

ವಿಜಯನಗರ | ‘ಗ್ರಾಮೀಣ ಸಂತೆ’ಗೆ ಕೂಡಿಬರದ ಕಾಲ

ವಿಜಯನಗರ ಜಿಲ್ಲೆಯ ಒಂದು ಕಡೆಗೂ ಜಾರಿಗೆ ಬರದ ಯೋಜನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಮಾರ್ಚ್ 2022, 19:45 IST
Last Updated 11 ಮಾರ್ಚ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ವರ್ಷ ಕಳೆದರೂ ಸರ್ಕಾರದ ಮಹತ್ವಕಾಂಕ್ಷಿ ‘ಗ್ರಾಮೀಣ ಸಂತೆ’ ಯೋಜನೆ ವಿಜಯನಗರ ಜಿಲ್ಲೆಯಲ್ಲಿ ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ಈ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಅನುಷ್ಠಾನಕ್ಕೆ ತರಬೇಕು. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕೆಲಸಗಳೇ ಆಗಿಲ್ಲ.

ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಯೋಜನೆ ಜಾರಿಗೆ ತರಬೇಕು. ಅಲ್ಲಿನ ಫಲಿತಾಂಶ ನೋಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರಬೇಕು. ಆದರೆ, ತಾಲ್ಲೂಕು ಕೇಂದ್ರಗಳಾಗಲಿ, ಪಂಚಾಯಿತಿಗಳಾಗಲಿ ಇದುವರೆಗೆ ಯಾವುದೇ ಕೆಲಸಗಳು ನಡೆದಿಲ್ಲ.

ADVERTISEMENT

ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂತೆಗೆ ಸ್ಥಳ ಗುರುತಿಸಿ, ಅಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಬೀದಿ ಬದಿ, ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳನ್ನು ಗುರುತಿಸಿ, ಸಂತೆಯ ಸ್ಥಳದಲ್ಲಿ ವ್ಯಾಪಾರ ಮಾಡಲು ವೇದಿಕೆ ಕಲ್ಪಿಸಬೇಕು. ವ್ಯಾಪಾರಿಗಳಿಗೆ ಕನಿಷ್ಠ ಶುಲ್ಕ ವಿಧಿಸಿ ಪಂಚಾಯಿತಿಗಳು ಆದಾಯ ಕೂಡ ವೃದ್ಧಿಸಿಕೊಳ್ಳಬಹುದು.

ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸ್ವಚ್ಛತೆ ಕಾಪಾಡುವುದು, ವ್ಯಾಪಾರಿಗಳಿಗೆ ನಿರ್ದಿಷ್ಟ ಜಾಗ ಗೊತ್ತುಪಡಿಸಿ ಅವರ ವಸ್ತುಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಯೋಜನೆಯ ಸದುದ್ದೇಶ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂತೆಗೆ ವ್ಯವಸ್ಥೆ ಮಾಡಿಕೊಡಬೇಕು. ಆದರೆ, ಇದುವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕಡೆ ಸಂತೆ ನಡೆದಿಲ್ಲ. ಈ ಕುರಿತು ಸಾರ್ವಜನಿಕರಿಗಾಗಲಿ, ವ್ಯಾಪಾರಿಗಳಿಗೆ ಮಾಹಿತಿಯೇ ಇಲ್ಲ. ಇದರ ಬಗ್ಗೆ ಪ್ರಚಾರವೂ ನಡೆದಿಲ್ಲ. ಇದನ್ನು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಉಮೇಶ ಎಂ. ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

‘ಪಂಚಾಯಿತಿ ಅಥವಾ ತಾಲ್ಲೂಕಿಗೆ ಒಂದು ಗ್ರಾಮೀಣ ಸಂತೆ ನಡೆಸಬೇಕು. ಆದರೆ, ಇದುವರೆಗೆ ಎಲ್ಲೂ ಆಗಿಲ್ಲ. 2021ರಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಈ ಕೆಲಸ ಆಗಬೇಕು. ಈ ವರ್ಷ ಜಿಲ್ಲೆಗೆ ಅನುದಾನ ಬಂದಿಲ್ಲ. ಅನುದಾನ ಬಂದ ತಕ್ಷಣ ಆರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಅನುದಾನದ ನೆಪವೊಡ್ಡಿ ಸಂತೆ ನಡೆಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಎಲ್ಲೆಲ್ಲಿ ಜಾಗವಿದೆಯೋ ಗುರುತಿಸಿ, ಮೂಲಸೌಕರ್ಯ ಕಲ್ಪಿಸಿ ವ್ಯಾಪಾರಿಗಳಿಗೆ ಅವರ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಬೀದಿ ಬದಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.