ADVERTISEMENT

ವಿಜಯನಗರ: ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ

5 ಎಕರೆ ಜಾಗ ಹಂಚಿಕೆ; ₹104 ಕೋಟಿ ಮೊತ್ತದ ಟೆಂಡರ್‌ ಕರೆಯಲು ಸಿದ್ಧತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಫೆಬ್ರುವರಿ 2022, 19:30 IST
Last Updated 4 ಫೆಬ್ರುವರಿ 2022, 19:30 IST
ಅನಿರುದ್ಧ್‌ ಶ್ರವಣ್‌ ಪಿ.
ಅನಿರುದ್ಧ್‌ ಶ್ರವಣ್‌ ಪಿ.   

ಹೊಸಪೇಟೆ (ವಿಜಯನಗರ): ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಂಡಿದೆ.

ಈಗಾಗಲೇ ನಗರದ ಟಿಎಸ್‌ಪಿ ಆವರಣದಲ್ಲಿ ತಾತ್ಕಾಲಿಕ ಜಿಲ್ಲಾಮಟ್ಟದ ಸಂಕೀರ್ಣ ನವೀಕರಣಗೊಂಡಿದ್ದು, ಇಷ್ಟರಲ್ಲೇ ಅಲ್ಲಿಂದಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣದ ಅಗತ್ಯ ಮನಗಂಡಿರುವ ಜಿಲ್ಲಾಡಳಿತ ಅದಕ್ಕಾಗಿ ಕಾರ್ಯತತ್ಪರವಾಗಿದೆ.

ಉದ್ದೇಶಿತ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಕಳುಹಿಸಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತವು ಜಂಬುನಾಥಹಳ್ಳಿ ರಸ್ತೆಯ ಎಚ್‌ಎಲ್‌ಸಿ ಕಾಲುವೆ ಸಮೀಪದಲ್ಲಿನಕೃಷ್ಣ ಮಠದ ಬಳಿ (ಸರ್ವೇ ಸಂಖ್ಯೆ 325) 5 ಎಕರೆ ಜಾಗ ಕೂಡ ಹಂಚಿಕೆ ಮಾಡಿದೆ. ಜಿಲ್ಲಾ ಖನಿಜ ನಿಧಿಯಿಂದ ₹104 ಕೋಟಿ ಅನುದಾನ ಕೂಡ ನಿಗದಿಯಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರ್‌ ವಿಭಾಗವು ಟೆಂಡರ್‌ ಕರೆಯಲು ಸಿದ್ಧತೆ ನಡೆಸಿದೆ.

ADVERTISEMENT

‘205 ಹಾಸಿಗೆಯ ಹೊಸ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಜಾಗ, ಅನುದಾನ ನಿಗದಿಯಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಆಸ್ಪತ್ರೆಯ ಆವರಣದಲ್ಲೇ ಬ್ಲಡ್‌ ಬ್ಯಾಂಕ್‌ ಕೂಡ ತಲೆ ಎತ್ತಲಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಎಚ್‌.ಎಲ್‌. ಜನಾರ್ದನ್‌ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

‘ಶೇ 90ರಷ್ಟು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದೆ. ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಕರ್ಯಗಳು ಹೊಸ ಆಸ್ಪತ್ರೆಯಲ್ಲಿ ಸಿಗಲಿವೆ. ಜನ ಬೇರೆ ಜಿಲ್ಲೆಗಳಿಗೆ ಹೋಗುವ ಅಗತ್ಯವಿರುವುದಿಲ್ಲ’ ಎಂದರು.

ನಗರದಲ್ಲಿ ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ಇದೆ. ಜಿಲ್ಲಾ ಆಸ್ಪತ್ರೆ ನಿರ್ಮಾಣಗೊಂಡರೆ ಜಿಲ್ಲೆಯ ಜನರಿಗೆ ಹೆಚ್ಚಿನ ಆರೋಗ್ಯ ಸೌಕರ್ಯಗಳು ಲಭಿಸಲಿವೆ.

ಜಿಲ್ಲಾ ಆಸ್ಪತ್ರೆಗೆ ಹಂಚಿಕೆ ಮಾಡಿರುವ ಜಾಗದ ಸಮೀಪದಲ್ಲೇ ಜಿಲ್ಲಾಡಳಿತಕ್ಕೆ ಸೇರಿದ 50 ಎಕರೆ ಜಾಗ ಇದೆ. ಮುಂಬರುವ ದಿನಗಳಲ್ಲಿ ಮೆಡಿಕಲ್‌ ಕಾಲೇಜು, ಪ್ಯಾರಾ ಮೆಡಿಕಲ್‌ ಕಾಲೇಜು ನಿರ್ಮಿಸುವ ಯೋಜನೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.